ಒಳಚರಂಡಿ ವೆಟ್‌ವೆಲ್‌ನ ೨ ಪಂಪುಗಳೂ ಹಾಳು ಮ್ಯಾನ್‌ಹೋಲ್ ತುಂಬಿ ಹೊರಹರಿಯ ತೊಡಗಿದ ಕೊಳಚೆ ವೆಟ್‌ವಲ್ ಬಾವಿಯಲ್ಲಿ ತೂತುಕೊರೆದು ಹೊರಚರಂಡಿಗೆ ಕೊಳಚೆ ಹರಿಸಿದ ನ.ಪಂ.

Jattipalla Olacharandi 1 Jattipalla Olacharandi 2
ಒಂದೆಡೆ ಸ್ವಚ್ಛ-ಭಾರತ ಸ್ವಚ್ಛ ಸುಳ್ಯ ಅಭಿಯಾನ, ಮತ್ತೊಂದೆಡೆ ಇಡೀ ನಗರದ ಕೊಳಚೆ ನೀರು ಸೇರುತ್ತಿದೆ ಪಯಸ್ವಿನಿ ಮಡಿಲು..! ಇದು ಎಲ್ಲೋ ದೂರದೂರಿನ ಕಥೆಯಲ್ಲ. ನಮ್ಮ ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿರುವ ಒಳಚರಂಡಿಯ ವೆಟ್‌ವೆಲ್ ಕಥೆ. ಯಾರು ರೋಗ ರುಜಿನ ಹರಡದಂತೆ ಎಚ್ಚರ ವಹಿಸಿ ಸ್ವಚ್ಚತೆ ಬಗ್ಗೆ ಸಲಹೆ ನೀಡಿ ಕ್ರಮಕೈಗೊಳ್ಳಬೇಕಿತ್ತೋ ಅವರೆ ನಗರದ ಒಳಚರಂಡಿ ಕೊಳಚೆ ನೀರನ್ನು ಸಾರ್ವಜನಿಕ ವಾಗಿ ಹೊರಚರಂಡಿಗೆ ಹರಿಯಬಿಡುತ್ತಿದ್ದು, ರೋಗ ರುಜಿನ ಹರಡಲು ಕಾರಣರಾಗಿದ್ದಾರೆ.
ಸುಳ್ಯ ನಗರದ ಕೊಳಚೆ ತೆರೆದ ಚರಂಡಿಯಲ್ಲಿ ಹರಿದು ದೊಡ್ಡ ಗಾತ್ರದ ಸೊಳ್ಳೆಗಳ ಉತ್ಪಾದನೆಯಾಗಿ ಭಾರೀ ರೋಗರುಜಿಣಗಳು ಹರಡು ತ್ತಿರುವುದನ್ನು ನಿವಾರಿಸಲಿಕ್ಕಾಗಿಯೇ ದಿನಕರ ಕಾನತ್ತಿಲರ ಹೋರಾಟದ ಫಲವಾಗಿ ಇಲ್ಲಿಗೆ ಒಳಚರಂಡಿ ಯೋಜನೆ ಮಂಜೂರುಗೊಂಡು ಅನು ಷ್ಠಾನಗೊಂಡಿದೆ. ಈಗ ಸುಳ್ಯ ನಗರದಲ್ಲಿ ಕೊಳಚೆನೀರು ಒಳಚರಂಡಿಯ ಮುಖಾಂತರ ಹರಿದು ಹಲವು ಸಲ ರಸ್ತೆ ಮಧ್ಯೆ ಇರುವ ಮ್ಯಾನ್‌ಹೋಲ್‌ಗ ಳಲ್ಲಿ ಉಕ್ಕಿ ಹರಿದು ನಗರವೆಲ್ಲಾ ಗಬ್ಬೆದ್ದು ನಾರುವ ಘಟನೆಗಳು ಆಗಾಗ ನಡೆಯುತ್ತಿದೆ. ಹಾಗಾದಾಗ ಕೂಡಲೇ ಅದನ್ನು ಸರಿಪಡಿಸುವ ಕಾರ್ಯವೂ ನಡೆಯುತ್ತದೆ. ಆದರೆ ಜಟ್ಟಿಪಳ್ಳ ರಸ್ತೆಯಲ್ಲಿ ವಿಶ್ವಕಾಂಪ್ಲೆಕ್ಸ್ ಎದುರು ಗಡೆಯಲ್ಲಿರುವ ಮ್ಯಾನ್‌ಹೋಲ್ ಮಾತ್ರ ಬಹುತೇಕ ದಿನ ಉಕ್ಕುತ್ತಲೇ ಇರುತ್ತದೆ. ದುರ್ಗಂಧ ಬೀರುತ್ತಲೇ ಇರುತ್ತದೆ.
ಸಮೀಪದಲ್ಲೇ ಇರುವ ವೆಟ್ ವೆಲ್‌ನಲ್ಲಿ ಕೊಳಚೆ ತುಂಬಿದ ಕೂಡಲೇ ಈ ಮ್ಯಾನ್ ಹೋಲ್
ತುಂಬುತ್ತದೆ. ಪಂಪು ಸ್ಟಾರ್ಟ್ ಮಾಡಿ ಕೊಳಚೆಯನ್ನು ಶುದ್ದೀಕರಣಾಗಾರದ ಕಡೆ ತಳ್ಳಿದಾಗ ಉಕ್ಕುವುದು ನಿಲ್ಲುತ್ತದೆ. ಆದರೆ ಈಗ ಎದುರಾಗಿರುವ ಸಂಕಷ್ಟ ಮಾತ್ರ ಗಂಭೀರ ಸ್ವರೂಪದ್ದು.
೩ ಪಂಪುಗಳು ಕೆಟ್ಟಿವೆ :
ಈ ವೆಟ್‌ವೆಲ್ ೨೦ ಅಡಿ ಆಳ ಇದೆ. ಇದರಲ್ಲಿ ತುಂಬಿದ ಕೊಳಚೆಯನ್ನು ಜಯನಗರದ ಹೊಸಗದ್ದೆಯಲ್ಲಿರುವ ಶುದ್ದೀಕರಣಾಗಾರಕ್ಕೆ ಪಂಪ್ ಮಾಡಲು ತಲಾ ೪೦ ಅಶ್ವಶಕ್ತಿಯ ೩ ಪಂಪುಗಳಿವೆ. ಒಂದು ಪಂಪು ಹಾಳಾಗಿ ವರ್ಷವಾಯಿತು. ಅದು ದುರಸ್ತಿಗೆ ಹೋಗಿ ೬ ತಿಂಗಳಾಯಿತು. ಇನ್ನೂ ದುರಸ್ತಿಯಾಗಿ ಬಂದಿಲ್ಲ. ಇನ್ನೆರಡು ಪಂಪುಗಳಲ್ಲಿ ಇನ್ನೊಂದೂ ಹಾಳಾಗಿತ್ತು. ಒಂದು ಪಂಪ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ ಅದು ಕೂಡಾ ವಾರದ ಹಿಂದೆ ಕೆಟ್ಟು ಹೋಗಿದ್ದು ಕೊಳಚೆಯನ್ನು ಪಂಪ್ ಮಾಡಲಾಗದೆ ವೆಟ್‌ವೆಲ್ ತುಂಬಿ ರಸ್ತೆಯಲ್ಲಿರುವ ಮ್ಯಾನ್‌ಹೋಲ್ ಉಕ್ಕಿ ಹರಿಯ ತೊಡಗಿತು.
ಕೊಳಚೆ ಹರಿಬಿಟ್ಟ
ನಗರ ಪಂಚಾಯತ್
ಹಾಳಾದ ಎರಡು ಪಂಪುಗಳೂ ೨೦ ಅಡಿ ಆಳದ ಬಾವಿಯಲ್ಲಿರುವ ಕಾರಣ ೩ ಟನ್‌ಗಿಂತ ಬಾರ ಇರುವ ಅವುಗಳನ್ನು ಮೇಲೆತ್ತಲು ಚೈನ್ ಪುಲ್ಲಿ ಬಳಸಬೇಕು. ಆದರೆ ವೆಟ್‌ವೆಲ್ ನಿರ್ಮಾಣದ ವೇಳೆ ಆಗಿನ ಇಂಜಿನಿಯರ್‌ಗಳು ವೆಟ್‌ವೆಲ್ ಕಟ್ಟಡಕ್ಕೆ ಒಂದು ಚೈನ್ ಪುಲ್ಲಿ ಚಾನೆಲ್ ಮತ್ತು ಜನರೇಟರ್ ಕೊಠಡಿಗೆ ೨ ಉಕ್ಕಿನ ಚಾನೆಲ್‌ಗಳ ನ್ನು ಅಳವಡಿಸಿರುವುದು ಕಂಡು ಬಂತು. ಪಂಪ್ ಮೇಲಕ್ಕೆತ್ತಬೇಕಾದರೆ ಒಂದೂವರೆ ಅಡಿ ಆಳದಲ್ಲಿ ನಿಂತು ಚೈನ್ ಮೂಲಕ ಮೇಲಕ್ಕೆತ್ತಬೇಕು. ಆದರೆ ವೆಟ್‌ವೆಲ್ ತುಂಬಾ ಕೊಳಚೆ ನೀರು ತುಂಬಿರುವುದರಿಂದ ಒಂದೂವರೆ ಅಡಿ ಆಳಕ್ಕೆ ಇಳಿಯುವ ಉzಶದಿಂದ ನಗರ ಪಂಚಾಯತ್‌ನವರು ಸುಲಭದಾರಿ ಕಂಡುಕೊಂಡರು. ವೆಟ್‌ವೆಲ್ ಅನ್ನು ತೂತು ಮಾಡಿ ಮಲಿನ ನೀರನ್ನು ಹೊರಚರಂಡಿಗೆ ಬಿಟ್ಟರು. ಮೊದಲೇ ಗಬ್ಬೆದ್ದಿರುವ ವಾತಾವರಣ ಮತ್ತಷ್ಟು ಗಬ್ಬೆದ್ದು ದುರ್ವಾಸನೆ ಹರಡಿತು. ಈ ಚರಂಡಿಯಲ್ಲಿ ಹರಿದ ಕೊಳಚೆ ವಿಶ್ವಕಾಂಪ್ಲೆಕ್ಸ್ ಮಾಲಕರ ತೋಟದಲ್ಲಿ ಉಜಿರ್‌ಕಣಿಯಲ್ಲಿ ತುಂಬಿ ಹರಿದು ಕಾನತ್ತಿಲ ಬೈಲಿನ ತೋಡಿಗೆ ಸೇರಿ ಅಲ್ಲಿಂದ ಕಂದಡ್ಕ ಹೊಳೆಯ ಮೂಲಕ ಪಯಸ್ವಿನಿ ನದಿಗೆ ಸೇರತೊಡಗಿತು.
ಈಗ ವಿಶ್ವ ಕಾಂಪ್ಲೆಕ್ಸ್ ಮಾಲಕರಾದ ಸಂದೇಶ್ ಕುರುಂಜಿಯವರ ಹಾಗೂ ಸರಳಾಯರ ತೋಟದಲ್ಲಿ ಕೊಳಚೆ ತ್ಯಾಜ್ಯ ನೀರು ತುಂಬಿದೆ. ವಿಶ್ವಕಾಂಪ್ಲೆಕ್ಸ್ ಕಟ್ಟಡವು ಈ ವೆಟ್‌ವೆಲ್‌ಗಿಂತ ತಗ್ಗಲ್ಲಿರುವುದರಿಂದ ವಿಶ್ವಕಾಂಪ್ಲೆಕ್ಸ್ ನಲ್ಲಿರುವ ನೆಲ ಮಹಡಿಯ ಅಂಗಡಿಗಳ ಎದುರುಗಡೆ ರಸ್ತೆಯ ತಡೆಗೋಡೆಯಿಂದ ತ್ಯಾಜ್ಯ ನೀರು ಜಿನುಗತೊಡಗಿದೆ.
ಸುತ್ತಮುತ್ತಲ ಬಾವಿಗಳ ನೀರು ಕಲುಷಿತಗೊಂಡಿದೆ. ಎಲ್ಲ ವ್ಯಾಪಾರಸ್ಥರೂ ತೊಂದರೆಗೊಳಗಾಗಿ ದ್ದಾರೆ. ಆಕ್ರೋಶಿರಾಗಿದ್ದಾರೆ. ಆದರೆ ಏನು ಮಾಡಬೇಕೆಂದು ತೋರದೆ ಚಿಂತೆ ಗೀಡಾಗಿದ್ದಾರೆ.
ಸೋಮವಾರದಿಂದ ಒಳಚರಂಡಿ
ಕನೆಕ್ಷನ್ ತಾತ್ಕಾಲಿಕ ಮುಚ್ಚುಗಡೆ
ಈ ಪರಿಸ್ಥಿತಿಯ ಕುರಿತು ನ.ಪಂ. ಇಂಜಿನಿಯರ್ ಶಿವಕುಮಾರ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ ಹಿಂದಿ ನವರು ಮಾಡಿದ ಅಸಮರ್ಪಕ ಕಾಮಗಾರಿಯಿಂದಾಗಿ ಇಂದು ನಮಗೆ ಸಮಸ್ಯೆಯಾಗಿದೆ. ವೆಟ್‌ವೆಲ್‌ನ ಕಟ್ಟಡದಲ್ಲಿ ಚೈನ್‌ಪುಲ್ಲಿಂಗ್‌ನ ಎರಡು ಚಾನೆಲ್‌ಗಳನ್ನು ಅಳವಡಿಸದೆ, ಜನರೇಟರ್ ಕೊಠಡಿಯಲ್ಲಿ ಅಳವಡಿ ಸಿರುವುದರಿಂದ, ಹಾಳಾದ ಪಂಪುಗಳನ್ನು ಮೇಲಕ್ಕೆತ್ತಲು ಹೊಸದಾಗಿ ಚಾನೆಲ್ ಅಳವಡಿಸುವ ಕಾರ್ಯ ಆರಂಭಿಸಿzವೆ. ಸಕ್ಕಿಂಗ್ ಯಂತ್ರದ ಮೂಲಕ ತ್ಯಾಜ್ಯವನ್ನು ಕೊಂಡೊಯ್ಯುವ ಪ್ರಯತ್ನ ಮಾಡಿದೆವು. ಅದು ಪರಿಣಾಮಕಾರಿಯಾಗಲಿಲ್ಲ. ಅದಕ್ಕಾಗಿ ತ್ಯಾಜ್ಯ ಹೊರ ಹೋಗಲು ವೆಟ್‌ವೆಲ್ ಗೆ ತೂತು ಕೊರೆದಿzವೆ. ಬೇರೆ ಉಪಾಯ ಕಾಣದೆ ಇದನ್ನು ಮಾಡಲಾಗಿದೆ. ನಾಳೆಯಿಂದ ಎಲ್ಲಾ ೪೦ ಒಳಚರಂಡಿ ಕನೆಕ್ಷನ್‌ಗಳನ್ನೂ ತಾತ್ಕಾಲಿಕವಾಗಿ ಮುಚ್ಚುತ್ತೇವೆ. ಆ ಬಳಿಕ ವೆಟ್‌ವೆಲ್ ಖಾಲಿ ಮಾಡಿ-ಪುನಃ ಕಾಂಕ್ರೀಟ್ ಮಾಡಿ, ಒರತೆ ನೀರು ವೆಟ್‌ವೆಲ್‌ಗೆ ಸೇರದಂತೆ ಮಾಡಬೇಕಾಗಿದೆ ಎಂದು ಹೇಳಿದರು.
ಅಲ್ಲಿ ಅಳವಡಿಸಿರುವ ಪಂಪ್‌ಗಳೂ ಕೂಡಾ ೪೦ ವರ್ಷ ಹಿಂದಿನವು. ಈಗ ಆ ಕಂಪೆನಿ ಇಲ್ಲ. ಆದ್ದರಿಂದ ಹಾಳಾದ ಪಂಪುಗಳ ಪಾರ್ಟ್ಸ್ ಕೂಡಾ ಸಿಗುವುದಿಲ್ಲ ಎಂದು ಅವರು ಹೇಳಿದರು.
ಸಂದೇಶ್ ಕುರುಂಜಿ ಪ್ರತಿಕ್ರಿಯೆ
ಒಳಚರಂಡಿ ತ್ಯಾಜ್ಯವನ್ನು ಓಪನ್ ಚರಂಡಿಗೆ ಬಿಡುತ್ತಿರುವುದರಿಂದ ಅದು ನಮ್ಮ ೫ ತೋಟದಲ್ಲಿ ಶೇಖರವಾಗಿದೆ. ನಿಜವಾಗಿ ನಗರ ಪಂಚಾಯತ್‌ನವರು ಈ ರೀತಿ ಮಾಡುವಂತಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳುವಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಒಳ್ಳೆ ಉzಶಕ್ಕೆಂದು ಜಾಗ ನೀಡಿದ ನಾವು ಈಗ ಇದನ್ನೆಲ್ಲ ಅನುಭವಿಸುತ್ತಾ ಅಸಹಾಯಕರಾಗಿರುವಂತಾಗಿದೆ. ಹಿಂದಿನ ಜಿಲ್ಲಾಧಿಕಾರಿ ಜಗದೀಶ್ ರನ್ನು ಕಂಡು ನಾವು ಮಾತನಾಡಿದಾಗ, ಒರತೆ ನೀರು ವೆಟ್‌ವೆಲ್ ಸೇರದಂತೆ ಕ್ರಮಕೈಗೊಳ್ಳಬೇಕೆಂದು ಅವರು ನಗರ ಪಂಚಾಯತ್‌ನವರಿಗೆ ತಿಳಿಸಿದ್ದರು. ಆದರೆ ಈ ಬಗ್ಗೆ ಇದುವರೆಗೆ ಕ್ರಮ ನಡೆದಿಲ್ಲ ಎಂದು ವಿಶ್ವಕಾಂಪ್ಲೆಕ್ಸ್ ಮಾಲಕ ಸಂದೇಶ್ ಕುರುಂಜಿ ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.