ಪ್ರಧಾನಿ ಮೋದಿ ಸ್ವಾಗತಕ್ಕೆ ಸಿದ್ಧಗೊಳ್ಳುತ್ತಿದೆ ಧರ್ಮಸ್ಥಳ ಶ್ರೀಕ್ಷೇತ್ರ, 1 ಲಕ್ಷ ಜನ ಸೇರುವಿಕೆಗೆ ಸಕಲ ವ್ಯವಸ್ಥೆ

Modi-2

ಪುತ್ತೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಆಗಮಿಸುತ್ತಿದ್ದು ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆದಿವೆ. ದ.ಕ. ಜಿಲ್ಲಾ ಬಿಜೆಪಿ ಪ್ರಧಾನಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸರ್ವ ಏರ್ಪಾಡು ಮಾಡಿಕೊಳ್ಳುತ್ತಿದೆ. ಇನ್ನು ಪ್ರಮುಖವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ರಕ್ಷಣಾ ಭದ್ರತಾ ದೃಷ್ಟಿಯಿಂದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಮೋಹನ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರಧಾನಿ ಬಂದಿಳಿಯುವ ಮತ್ತು ಸಮಾರಂಭ ನಡೆಯುವ ಕ್ರೀಡಾಂಗಣವನ್ನು ಪರಿಶೀಲಿಸಿ ಅಚ್ಚುಕಟ್ಟಿನ ಪೊಲೀಸ್ ಭದ್ರತಾ ವ್ಯವಸ್ಥೆಗೆ ತಯಾರು ಮಾಡಿದ್ದಾರೆ. ಮಂಜುನಾಥ ಸ್ವಾಮಿಯ ದರ್ಶನ ಮಾಡಿದ ಬಳಿಕ ಪ್ರಧಾನಿಯವರು ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ನಡೆಯುವ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ವರ್ಧಂತಿಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ದೇವಳಕ್ಕೆ ಭೇಟಿ ನೀಡುತ್ತಿರುವುದರಿಂದ ಭದ್ರತೆಯ ದೃಷ್ಟಿಯಿಂದ ಅ.28ರಂದು ಶನಿವಾರ ರಾತ್ರಿ 9ರಿಂದ ಭಾನುವಾರ ಅಪರಾಹ್ನ 2 ಗಂಟೆಯ ವರೆಗೆ ದೇವಳಕ್ಕೆ ಸಾರ್ವಜನಿಕ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಅ. 30 ಎರಡನೇ ಕಾರ್ತಿಕ ಸೋಮವಾರದ ಶುಭದಿನವಾದುದರಿಂದ ಒಂದು ದಿನ ಮುಂಚಿತವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅನಾನುಕೂಲವಾಗದ ರೀತಿಯಲ್ಲಿ ಮುಂಗಡವಾಗಿ ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಅ. 29ರಂದು ಬೆಳಿಗ್ಗೆ ಸುಮಾರು 10.15ರ ವೇಳೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಸುಮಾರು 10.50 ರ ವೇಳೆಗೆ ಕ್ಷೇತ್ರಕ್ಕೆ ತಲುಪಲಿದ್ದಾರೆ.
ಸಮಾರಂಭದಲ್ಲಿ ’ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ’ಯ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ’ರುಪೇ’ ಕಾರ್ಡ್ಸ್ ವಿತರಣೆಗೆ ಅವರು ಚಾಲನೆ ನೀಡಲಿದ್ದಾರೆ. (ಕ್ಯಾಶ್‌ಲೆಸ್ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಧ್ಯೆ ಒಪ್ಪಂದದಲ್ಲಿ ರುಪೇ ಕಾರ್ಡ್ ಮೂಲಕ ಸುಮಾರು 12 ಲಕ್ಷ ಮಂದಿ ಸದುಪಯೋಗ ಪಡೆಯುತ್ತಿರುವುದು ಇಲ್ಲಿ ಉಲ್ಲೇಖನೀಯ.) ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿ ಅಪರಾಹ್ನ 1 ಗಂಟೆಗೆ ಅವರು ಧರ್ಮಸ್ಥಳದಿಂದ ತೆರಳಲಿದ್ದಾರೆ. ಬಳಿಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಎಂದು ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕಾರ‍್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರೀ ರಕ್ಷಣಾ ಕಾರ್ಯಾಚರಣೆ:
ಪೊಲೀಸ್ ಸುವ್ಯವಸ್ಥೆಗೋಸ್ಕರ ಭಾರೀ ಕಾರ್ಯಾಚರಣೆ ನಡೆದಿದ್ದು, ಧರ್ಮಸ್ಥಳದ ಸುತ್ತಮುತ್ತ ಪರಿಸರದಲ್ಲಿ ಈಗಾಗಲೇ ಎಎನ್‌ಎಫ್ ತಂಡದಿಂದ ವಿಶೇಷ ಕೂಂಬಿಂಗ್ ನಡೆಯುತ್ತಿದೆ. ನಕ್ಸಲ್ ನಿಗ್ರಹ ದಳ, 10 ಎಸ್ಪಿ ದರ್ಜೆಯ ಅಧಿಕಾರಿಗಳು, ಪಿ.ಎಸ್.ಐ ಮತ್ತು ಡಿ.ಎಸ್.ಪಿ ದರ್ಜೆಯ 150 ಅಧಿಕಾರಿಗಳು, 2000ಕ್ಕೂ ಹೆಚ್ಚು ಪೊಲೀಸ್ ಪೇದೆಗಳು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(ಎಸ್‌ಪಿಜಿ) ಪ್ರಮುಖ ಅಧಿಕಾರಿ ಎಮ್. ಪಿ. ಗುಪ್ತಾ ಸೇರಿದಂತೆ 11 ಅಧಿಕಾರಿಗಳ ತಂಡ ಉಜಿರೆ ಹಾಗೂ ಧರ್ಮಸ್ಥಳದಲ್ಲಿ ಸ್ಥಳ ಪರಿಶೀಲನೆ ನಡೆಸಿ ಭದ್ರತಾ ಕಾರ್ಯಗಳನ್ನು ನಡೆಸುತ್ತಿದೆ. ವೇದಿಕೆ ನಿರ್ಮಾಣ ಕಾರ್ಮಿಕರ ಮೇಲೆ ನಿಗಾ ಇರಿಸಲು ಪೊಲೀಸರನ್ನು ನೇಮಿಸಲಾಗಿದೆ.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳದವರು ಕನ್ಯಾಡಿ, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಕೂಂಬಿಂಗ್ ನಡೆಸುತ್ತಿದ್ದು ಎಲ್ಲಾ ಪರಿಸರವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸ್‌ಪಿಜಿ ತಂಡವು ಉಜಿರೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ, ಸಂಘಟಕರ ಜತೆ ಸಮಾಲೋಚನಾ ಸಭೆ ನಡೆಸಿದೆ.

ಧರ್ಮಸ್ಥಳ ಉಜಿರೆ ಸಂಚಾರ ವ್ಯವಸ್ಥೆ :
ಭಾನುವಾರ ಬೆಳಗ್ಗೆ 7ರಿಂದ 9ರವರೆಗೆ ಧರ್ಮಸ್ಥಳದಿಂದ ಉಜಿರೆವರೆಗೆ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದ್ದು ಬಳಿಕ ಪ್ರಧಾನಿ ನಿರ್ಗಮನದವರೆಗೆ ಅವಕಾಶವಿರುವುದಿಲ್ಲ. ಕೊಕ್ಕಡ ಕಡೆಯಿಂದ ಉಜಿರೆಗೆ ಕಾರ್ಯಕ್ರಮಕ್ಕೆ ಹೋಗ ಬಯಸುವವರು 9 ಗಂಟೆಯೊಳಗಾಗಿ ಉಜಿರೆ ತಲುಪತಕ್ಕದ್ದು. ಇಲ್ಲವೇ ಕೊಕ್ಕಡ-ನೆಲ್ಯಾಡಿ-ಉಪ್ಪಿನಂಗಡಿ-ಗುರುವಾಯನಕೆರೆ-ಬೆಳ್ತಂಗಡಿಯಾಗಿ ಉಜಿರೆಯನ್ನು ಪ್ರವೇಶಿಸಬಹುದು. ಚಾರ್ಮಾಡಿ, ಮಂಗಳೂರು ಕಡೆಯಿಂದ ಬರುವ ರಸ್ತೆಗಳು ಮುಕ್ತವಾಗಿರುತ್ತದೆ. ಬದಲಿ ರಸ್ತೆಗಳಲ್ಲಿ ಬರಬೇಕಾಗುತ್ತದೆ. ಶಿಶಿಲ, ಕೊಕ್ಕಡ ಕಡೆಯಿಂದ ಬರುವವರು ಧರ್ಮಸ್ಥಳದ ಕಲ್ಲೇರಿ ತನಕ ಬಂದು ಅಲ್ಲಿಂದ ಮುಂಡ್ರುಪ್ಪಾಡಿ, ಮುಂಡಾಜೆ ಮಾರ್ಗವಾಗಿ ಉಜಿರೆಗೆ ಬರಬೇಕು. ಉಡುಪಿ, ಕಾರ್ಕಳ, ಮೂಡುಬಿದ್ರೆಯಿಂದ ಬೆಂಗಳೂರಿಗೆ ಹೋಗುವವರು ಗುರುವಾಯನಕೆರೆ, ಉಪ್ಪಿನಂಗಡಿ ಮಾರ್ಗವಾಗಿ ತೆರಳಬೇಕು. ಭಕ್ತಾದಿಗಳು ಹಾಗೂ ಸಾರ್ವಜನಿಕರು ಇದನ್ನು ಗಮನಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.

ಪ್ರಧಾನಮಂತ್ರಿಗಳ ಉಜಿರೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸೂಚನೆ :
ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಕಾರ್ಯಕ್ರಮವನ್ನು ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರಿಗೆ ಉಜಿರೆ ಕಡೆಯಿಂದ, ಬೆಳಾಲು ರಸ್ತೆಯ ಕಡೆಯಿಂದ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಉಜಿರೆಯಿಂದ ಕಾಲೇಜು ಕಡೆಗಿರುವ ದ್ವಿಸಂಚಾರ ರಸ್ತೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕಾರ್ಯಕ್ರಮಕ್ಕೆ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ವಾಹನದಲ್ಲಿ ಆಗಮಿಸಿ ಜನಾರ್ಧನ ಸ್ವಾಮಿ ರಥಬೀದಿಯಲ್ಲಿ ಇಳಿದು ನಡೆದುಕೊಂಡು ಕ್ರೀಡಾಂಗಣಕ್ಕೆ ಬರುವುದು. ಎಲ್ಲ ಸಾರ್ವಜನಿಕರು 10.30ರೊಳಗಾಗಿ ಕ್ರೀಡಾಂಗಣವನ್ನು ಪ್ರವೇಶಿಸಿ ಆಸೀನರಾಗಬೇಕು.
ವಿ.ಐ.ಪಿ. ಪಾಸ್ ಹೊಂದಿರುವವರು ಉಜಿರೆ ಕಾಲೇಜ್ ಬಸ್‌ನಿಲ್ದಾಣದ ಸಮೀಪ ರಚಿಸಲಾಗಿರುವ ದ್ವಾರದಿಂದ ಪ್ರವೇಶಿಸುವುದು. ವಾಹನಗಳಲ್ಲಿ ಬರುವ ವಿಐಪಿ ಪಾಸುದಾರರು ಇಲ್ಲಿಯೇ ಇಳಿದು ತಮ್ಮ ವಾಹನವನ್ನು ಅಜ್ಜರಕಲ್ಲು ವಾಹನ ನಿಲುಗಡೆಗೆ ಕಳುಹಿಸುವುದು. ಎಲ್ಲ ಪಾಸುದಾರರು ತಮಗೆ ಒದಗಿಸಲಾದ ಪಾಸ್ ಮತ್ತು ಫೋಟೋಐಡಿಯನ್ನು ತರುವುದು. ವಾಹನದಲ್ಲಿ ಬರುವ ವಿಐಪಿ ಪಾಸುದಾರರು ವಾಹನ ಪಾಸ್ ಪಡಕೊಂಡಿರಬೇಕು ಎಂದರು. ಕ್ರೀಡಾಂಗಣದಲ್ಲಿ ನೀರಿನ ಬಾಟಲ್ ಮತ್ತು ಚೀಲಗಳನ್ನು ನಿಷೇಧಿಸಲಾಗಿದೆ. ಕ್ರೀಡಾಂಗಣದಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ವಾಹನ ನಿಲುಗಡೆ :
ಬೆಳ್ತಂಗಡಿ ಕಡೆಯಿಂದ ಬರುವವರಿಗೆ ಜನಾರ್ಧನ ಸ್ವಾಮಿ ಪ್ರಾಥಮಿಕ ಶಾಲೆ, ಉಜಿರೆ, ಅಜ್ಜರಕಲ್ಲು ಮೈದಾನದಲ್ಲಿ ಹಾಗೂ ಬೆಳಾಲು ಕ್ರಾಸ್‌ನ ತುಳು ಗ್ರಾಮದಲ್ಲಿ, ಇತರರಿಗೆ ಜನಾರ್ಧನ ಸ್ವಾಮಿರಥ ಬೀದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಜಿರೆ ದ್ವಾರದಿಂದ ಎಲ್ಲರೂ ನಡೆದುಕೊಂಡೇ ಸಭಾಂಗಣಕ್ಕೆ ಬರಬೇಕಾಗುತ್ತದೆ.
1 ಲಕ್ಷ ಜನರಿಗೆ ವ್ಯವಸ್ಥೆ :
ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘದ 60 ಸಾವಿರ ಸದಸ್ಯರು, 25 ಸಾವಿರ ಬಿಜೆಪಿ ಕಾರ‍್ಯಕರ್ತರು ಸೇರಿದಂತೆ ಒಟ್ಟು 1 ಲಕ್ಷ ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಬರುವಾಗ ಯಾವುದಾದರೂ ಐ.ಡಿ ಪ್ರೂಫ್ ತರಬೇಕು. ಇಲ್ಲವಾದರೆ ಯಾರಾದರೂ ಪರಿಚಯದವರು ಬೇಕು, ಸಾರ್ವಜನಿಕರು, ವಿ.ಐ.ಪಿಗಳು ಸೇರಿದಂತೆ 40 ಕಡೆಗಳಲ್ಲಿ ತಪಾಸಣೆ ನಡೆಸಿ ಒಳಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.
ಡಾ. ಹೆಗ್ಗಡೆ ಪರಿಶೀಲನೆ :
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅ.27ರಂದು ಬೆಳಿಗ್ಗೆ ಉಜಿರೆ ಕ್ರೀಡಾಂಗಣಕ್ಕೆ ಆಗಮಿಸಿ, ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು.

ಉಜಿರೆಯಲ್ಲಿ ಸಭಾ ವೇದಿಕೆ, ಸಭಾಂಗಣ ನಿರ್ಮಾಣ
ವೇದಿಕೆ ಹಾಗೂ ಸಭಾಂಗಣ ನಿರ್ಮಾಣದ ತಯಾರಿ ಕಾರ್ಯ ಭರದಿಂದ ನಡೆಯುತ್ತಿದ್ದು , ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ಪಡೆ ಎಸ್‌ಪಿಜಿ ಬೀಡು ಬಿಟ್ಟಿದೆ. ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕಾರ್ಮಿಕರು ಬೃಹತ್ ಜರ್ಮನ್ ಮಾದರಿ ಚಪ್ಪರದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕ್ರೇನ್‌ಗಳ ಸಹಾಯದಿಂದ ಬೃಹತ್ ತೊಲೆಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 200ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಇಲ್ಲಿನ ಕ್ಷಣಕ್ಷಣದ ಬೆಳವಣಿಗೆಗಳನ್ನು ಗಮನಿಸಲಾಗುತ್ತದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಎಸ್‌ಪಿಜಿಯ ಅರವಿಂದ್ ತಿಳಿಸಿದ್ದಾರೆ.

ವಿಶೇಷ ವೇದಿಕೆ, ಪಿಎಂಒ ಕಚೇರಿ

100×30 ಅಡಿಯ ಮುಖ್ಯ ಸಭಾ ವೇದಿಕೆ ಚಪ್ಪರ. ಅದೊರಳಗೆ 40×30 ಅಡಿ ಕಾರ್ಯಕ್ರಮ ನಡೆಯುವ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆಯ ಪಕ್ಕದಲ್ಲಿ ಎರಡು ಕಚೇರಿಗಳನ್ನು ತೆರೆಯಲಾಗುತ್ತದೆ. ಒಂದು ಪ್ರಧಾನಿಯವರಿಗಾಗಿ 20×20 ಅಡಿ ಚಪ್ಪರ ಹಾಗೂ ಇನ್ನೊಂದು ಪ್ರಧಾನಿ ಕಚೇರಿ(ಪಿಎಂಒ)ಗಾಗಿ 20×20 ಅಡಿ ಕಚೇರಿ ತೆರೆಯಲಾಗುತ್ತದೆ. ವೇದಿಕೆಯ ಬಳಿ ಬ್ಯಾಕ್ ಆಫೀಸ್, 60 ಅಡಿ ಅಂತರದಲ್ಲಿ ಡಿ ಜೋನ್ ನಿರ್ಮಿಸಲಾಗುತ್ತಿದೆ. ಅಲ್ಲಿ ಬ್ಯಾರಿಕೇಡ್ ಹಾಕಲಾಗುತ್ತದೆ. ವೇದಿಕೆಯ ಮುಂಭಾಗ ಪೆಂಡಾಲ್, ಬದಿಗಳಲ್ಲಿ ಹಾಕಲಾಗುವ ಪೆಂಡಾಲ್‌ಗಳಲ್ಲಿ 35  ಸಾವಿರ ಆಸನಗಳನ್ನು ಹಾಕಲಾಗುತ್ತದೆ. ಮೈದಾನ ಪ್ರವೇಶಿಸಲು ನಾಲ್ಕು ಪ್ರವೇಶದ್ವಾರಗಳು ಇರುತ್ತವೆ ಎಂದು ತಿಳಿದುಬಂದಿದೆ.

ಪ್ರಧಾನಿಯವರ ದಿನಚರಿ

* ಬೆಳಗ್ಗೆ 7.30ಕ್ಕೆ ದೆಹಲಿ ವಿಮಾನ ನಿಲ್ದಾಣ, ಪ್ರಯಾಣ

* 10.15  ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ

* 10.20ಕ್ಕೆ ಮಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ

* 10.50ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್ ಇಳಿಯುವುದು.

* 11.00ಕ್ಕೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಆಗಮನ

* 11.00 ರಿಂದ 11.30ರ ವರೆಗೆ ಶ್ರೀ ಮಂಜುನಾಥ ಸ್ವಾಮಿ ದರ್ಶನ ಹಾಗೂ ಪೂಜೆ

* 11.35ಕ್ಕೆ ಧರ್ಮಸ್ಥಳಕ್ಕೆ ರಸ್ತೆಯ ಮೂಲಕ ಉಜಿರೆಗೆ ಪಯಣ

* 11.45ಕ್ಕೆ ಉಜಿರೆಗೆ ಆಗಮನ

* 11.45 ರಿಂದ 12.45ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.

* 12.45 ಉಜಿರೆಯಿಂದ ಧರ್ಮಸ್ಥಳಕ್ಕೆ ರಸ್ತೆ ಮೂಲಕ ಪ್ರಯಣ

* 1.00ಕ್ಕೆ ಧರ್ಮಸ್ಥಳ ಹೆಲಿಪ್ಯಾಡ್‌ಗೆ ಆಗಮನ

* 1.05ಕ್ಕೆ ಧರ್ಮಸ್ಥಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ

* 1.35 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ

* 1.40ಕ್ಕೆ ಉಪಾಹಾರ, ಬೆಂಗಳೂರಿಗೆ ಪ್ರಯಣ.

ಅಲಂಕೃತಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ: 
ಪ್ರಧಾನಿಯವರ ಆಗಮನದ ಹಿನ್ನಲೆಯಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ಎಲ್ಲಿಲ್ಲದ ಆಲಂಕಾರ ಸಜ್ಜುಗೊಳಿಸಲಾಗಿದೆ. ಕ್ಷೇತ್ರದ ರಥಬೀದಿ ಬಣ್ಣಬಣ್ಣದ ಕೊಡೆ, ಪುಷ್ಪಾಲಂಕಾರ, ಗೂಡುದೀಪಗಳು, ಸಾಂಪ್ರದಾಯಿಕ ದ್ವಾರಗಳಿಂದ ಕಂಗೊಳಿಸುತ್ತಿದೆ. ಪ್ರಧಾನಿಯವರ ಭಾಗವಹಿಸುವ ಸಮಾರಂಭದ ಸಭಾಂಗಣವನ್ನೂ ವಿಶೇಷ ಆಲಂಕಾರಗಳಿಂದ ಸಿದ್ಧಪಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.