ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗದ ಕಟ್ಟಡ ಕಾರ್ಮಿಕರು -ಹಲವು ವರ್ಷಗಳಿಂದ ಇಲ್ಲೇ ನೆಲೆಯೂರಿದ್ದರೂ ದಾಖಲೆ ಇಲ್ಲ -ಸದಸ್ಯರಾಗಿ ಸವಲತ್ತು ಪಡೆಯಲು ಸಂಘಟನೆಯ ಮನವಿ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಸರ್ಕಾರದ ಸವಲತ್ತು ಪಡೆಯಲು ಅವಕಾಶವಿದ್ದರೂ ಬಹತೇಕ ಕಾರ್ಮಿಕರು ಇನ್ನೂ ಸದಸ್ಯರಾಗದೇ ಸವಲತ್ತು ವಂಚಿತರಾಗುತ್ತಿದ್ದಾರೆ.

ಕಟ್ಟಡ ನಿರ್ಮಾಣದಲ್ಲಿ ಮುಖ್ಯವಾಗಿ ಕಲ್ಲು ಕಟ್ಟುವವರು, ಗಾರೆ ಕೆಲಸದವರು, ಸೆಂಟ್ರಿಂಗ್‌ನವರು, ಬಡಗಿಗಳು, ಪೈಂಟಿಂಗ್‌ನವರು, ಟೈಲ್ಸ್ ಅಳವಡಿಸುವವರು ಇತ್ಯಾದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕಟ್ಟಡ ನಿರ್ಮಾಣ ಸಂದರ್ಭ ಹಲವು ಅಪಾಯಕಾರಿ ಸಂದರ್ಭಗಳೂ ಎದುರಾಗುತ್ತವೆ. ಕೆಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಅಪಘಡ ಸಂಭವಿಸಿ ಮೃತಪಟ್ಟಿದ್ದೂ ಇದೆ. ಇಂತಹ ಸಂದರ್ಭ ಅವರಿಗೆ ಸರ್ಕಾರದಿಂದ ಯಾವುದೇ ಸವಲತ್ತು, ನೆರವು ಕೂಡಾ ದೊರೆಯುವುದಿಲ್ಲ. ಅಸಂಘಟಿತ ವಲಯದಲ್ಲಿರುವ ಕಟ್ಟಡ ಕಾರ್ಮಿಕರರಿಗೆ ಸವಲತ್ತು ನೀಡಲು ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ರಚಿಸಿದ್ದು, ಇದಕ್ಕೆ ಅಗತ್ಯ ನಿಧಿಯನ್ನು ನೀಡುತ್ತಿದೆ. ಕಾರ್ಮಿರಾಗಿ ಸೇವೆ ಮಾಡುತ್ತಿರುವುದಕ್ಕೆ ಒಮ್ಮೆ ದಾಖಲೆ ಒದಗಿಸಿ ಸದಸ್ಯರಾದರೆ ಮುಂದಿನ ಮೂರು ವರ್ಷಗಳವರೆಗೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಹಲವು ಸವಲತ್ತುಗಳನ್ನು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಪಡೆಯಲು ಅವಕಾಶವಿದೆ. ಮೂರು ವರ್ಷ ಕಳೆದ ಬಳಿಕ ಅದನ್ನು ನವೀಕರಿಸಬೇಕು. ಈ ಕುರಿತು ಕಾರ್ಮಿಕ ಸಂಘಟನೆಗಳು ಸಾಕಷ್ಟು ಪ್ರಚಾರ ಮಾಡಿದ್ದರೂ ಹಲವು ಕಾರ್ಮಿಕರಿಗೆ ಈ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಹಾಗಾಗಿ ಅವರು ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿಲ್ಲ.

ಕಟ್ಟಡ ಕಾಮಿಕರಿಗೆ ಇಂದು ಉತ್ತಮ ವೇತನವಿದೆ. ಹಾಗಿದ್ದೂ ಅಪಘಾತ ಸಂದರ್ಭ ಅವರಿಗೆ ನೆರವಿಗೆ ಬರುವುದು ಕಾರ್ಮಿಕ ಕಲ್ಯಾಣ ಮಂಡಳಿ ಮಾತ್ರ. ೧೦ ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಕಟ್ಟಡ ನಿರ್ಮಾಣ ಸಂದರ್ಭ ಪರವಾನಿಗೆ ನೀಡುವಾಗಲೇ ಮನೆ ಮಾಲಕರಿಂದ ಶೇ.೧ರಷ್ಟು ತೆರಿಗೆಯನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಸರ್ಕಾರ ವಸೂಲಿ ಮಾಡುತ್ತದೆ. ಹೀಗೆ ಸಂಗ್ರಹಿಸಿದ ನಿಧಿಯನ್ನು ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಮತ್ತೆ ಕಾರ್ಮಿಕರ ಸವಲತ್ತಿಗೆ ನೀಡಲಾಗುತ್ತದೆ. ಕಟ್ಟಡ ಕಾಮಗಾರಿ ಗುತ್ತಿಗೆ ಪಡೆಯುವವರು ಮೇಸ್ತ್ರಿಗಳ ಮೂಲಕ ಕಾಮಗಾರಿ ನಡೆಸುತ್ತಾರೆ. ಇಂತಹ ಮೇಸ್ತ್ರಿಗಳು ಕಡಿಮೆ ವೇತನಕ್ಕೆ ದುಡಿಯುವ ಉತ್ತರ ಕರ್ನಾಟಕದ ಕಾರ್ಮಿಕನ್ನು ಗೊತ್ತುಪಡಿಸುತ್ತಾರೆ. ಸುಳ್ಯ ತಾಲೂಕಿನಲ್ಲಿ ಕೆಲಸ ಮಾಡುವವರಲ್ಲಿ ಶೇಕಡಾ ೮೦ರಷ್ಟು ಕಾರ್ಮಿಕರು ಹೊರ ಜಿಲ್ಲೆ, ರಾಜ್ಯಗಳಿಂದ ಬಂದವರು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆ ಮಾಡಲು ಆಧಾರ್ ಕಾರ್ಡ್ ಪ್ರತಿ, ೫ ಪಾಸ್‌ಪೋರ್ಟ್ ಸೈಜ್‌ನ ಹಾಗೂ ಒಂದು ಸ್ಟಾಂಪ್ ಸೈಜಿನ ಫೋಟೋ ಇದ್ದರೆ ಸಾಕು. ಕಾರ್ಮಿಕ ಸಂಘದ ಸದಸ್ಯತ್ವ ಮತ್ತು ಸೇವಾ ಶುಲ್ಕ ಸೇರಿ ೫೩೦ ರೂಪಾಯಿ ನೀಡಿದಲ್ಲಿ ಸುಳ್ಯದ ಕಟ್ಟಡ ಕಾರ್ಮಿಕರ ಸಂಘದ ಕಚೇರಿಯವರು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾವಣೆ ಮಾಡಿ ಗುರುತು ಚೀಟಿ ನೀಡುತ್ತಾರೆ. ನೇರವಾಗಿ ಪುತ್ತೂರಿನ ಕಾರ್ಮಿಕ ಇಲಾಖೆಯ ಕಚೇರಿಯಲ್ಲೂ ನೋಂದವಣೆ ಮಾಡಿಸಬಹುದಾಗಿದೆ. ಆದರೆ ಅಲ್ಲಿಗೆ ಎರಡೆರಡು ಬಾರಿ ಹೋಗಿ ಬರಬೇಕಾಗುತ್ತದೆ. ಅಲ್ಲದೆ ಇಲಾಖೆಯ ಅಧಿಕಾರಿಗಳು ಉತ್ಸಾಹದಿಂದ ಕೆಲಸ ಮಾಡಿಕೊಡುತ್ತಿಲ್ಲ ಎಂಬ ಆರೋಪಗಳು ಇವೆ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸದೇ ಇರುವ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದಂತೆ ಕಾರ್ಮಿಕ ಮುಖಂಡರಾದ ನೆಲ್ಸನ್ ಮನವಿ ಮಾಡಿದ್ದಾರೆ

ಹಲವು ಬಾರಿ ಅಪಘಾತಗಳು ಆಗಿ ನೋಂದಣಿ ಇಲ್ಲದೆ ಪರಿಹಾರ ಸಿಗದ ನಿದರ್ಶನಗಳು ಸಾಕಷ್ಟಿದ್ದರೂ ಕಾರ್ಮಿಕರು ಇನ್ನೂ ಜಾಗೃತರಾಗಿಲ್ಲ. ಗುತ್ತಿಗೆದಾರರ ಸಭೆ ನಡೆಸುವ ಮೂಲಕ ಅವರಿಗೆ ಮನವರಿಕೆ ಮಾಡುವ ಯತ್ನ ನಡೆಸುವುದಾಗಿ ಕಾರ್ಮಿಕ ಮುಖಂಡ ಬಿಜು ಆಗಸ್ಟಿನ್ ಹೇಳಿದ್ದಾರೆ.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.