ಗರ್ಭಿಣಿ ಮಹಿಳೆಗೆ ಮೊಬೈಲ್ ಬಳಕೆ ಎಷ್ಟು ಸುರಕ್ಷಿತ..

pregnancyಪ್ರಸಕ್ತ ವಿದ್ಯಮಾನದ ಕಂಪ್ಯೂಟರ್ ಯುಗದಲ್ಲಿ ಮಾನವನ ಅವಿಭಾಜ್ಯ ಅಂಗವಾಗಿ ಸ್ಥಾನ ಪಡೆದಿರುವ ಮೊಬೈಲ್ ಫೋನ್ ಸಕಲ ಜೀವಸಂಕುಲಗಳಿಗೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಹಲವು ಜಿಜ್ಞಾಸೆಗಳು ಹುಟ್ಟಿಕೊಂಡಿವೆ. ಈ ಕುರಿತು ಹಲವು ಸಂಶೋಧನೆಗಳು ನಡೆದಿವೆ, ಇನ್ನೂ ನಡೆಯುತ್ತಲೇ ಇವೆ. ಪ್ರತಿ ಸಂಶೋಧನೆ, ಸಮೀಕ್ಷೆಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆ ಧೀರ್ಘಕಾಲಿಕ ಮಾರಣಾಂತಿಕ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನೇ ಹೇಳುತ್ತಿವೆ.

ಜನಸಾಮಾನ್ಯರಲ್ಲಿ ಮೊಬೈಲ್ ಫೋನ್ ವ್ಯಾಪಕ ಬಳಕೆ ಪ್ರಕ್ರಿಯೆ ೧೯೯೦ ನೇ ದಶಕದಿಂದ ಪ್ರಾರಂಭವಾಗಿರುವುದರಿಂದ, ಸಂಶೋಧನಾ ವರದಿಗಳಿಗೆ ಇನ್ನೂ ನಿಖರವಾದ ಸಾಕ್ಷಿಗಳ ಕೊರತೆ ಇರುವುದರಿಂದ ಈ ವರದಿಗಳು ಸ್ಪಷ್ಟ ನಿಲುವನ್ನು ಹೊಂದಿಲ್ಲ. ಹಾಗಿದ್ದರೂ ಇದುವರೆಗೆ ನಡೆದಿರುವ ಸಂಶೋಧನೆಗಳ ಅಂಕಿ ಅಂಶ ಲೆಕ್ಕಾಚಾರದ ಪ್ರಕಾರ ಮೊಬೈಲ್ ಬಳಕೆ ಅಪಾಯಕಾರಿ ಎಂಬುದಂತು ಸಾಬೀತಾಗಿದೆ. ಹೊರಜಗತ್ತಿನ ಚರಾಚರ ವಸ್ತುಗಳ ಮೇಲೆ ಇಷ್ಟೊಂದು ಪರಿಣಾಮ ಬೀರುತ್ತಿರುವ ಈ ಮೊಬೈಲ್ ಫೋನ್, ಇನ್ನೂ ಜಗತ್ತಿನ ಬೆಳಕನ್ನೇ ನೋಡದ ಭ್ರೂಣದ ಮೇಲೆ ಏನು ಪರಿಣಾಮ ಬೀರುತ್ತಿದೆ ? ಗರ್ಭಿಣಿ ಹೆಣ್ಮಗಳು ಮೊಬೈಲ್ ಬಳಸುವುದರಿಂದ ಉಂಟಾಗುವ ಪರಿಣಾಮಗಳೇನು ? ಈ ಕುರಿತು ಸಂಶೋಧನೆ, ಸಮೀಕ್ಷೆಗಳು ಏನು ಹೇಳಿವೆ ? ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ..
ಸಂಶೋಧನೆಗಳು ಏನು ಹೇಳುತ್ತವೆ ?
ಇದುವರೆಗೆ ನಡೆದ ಸಂಶೋಧನೆಗಳಲ್ಲಿ ಗರ್ಭಿಣಿಯರು ಮೊಬೈಲ್ ಫೋನ್‌ಗಳ ಅಲ್ಪಾವಧಿ ಬಳಕೆಯಿಂದ ಯಾವುದೇ ಗಂಭೀರ ತೊಂದರೆಗಳು ಎದುರಾಗುವುದಿಲ್ಲ ಎಂದು ತಿಳಿಸಿವೆ.
ಶಿಶುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಇದೇ ವೇಳೆ ಇದಕ್ಕೆ ಸಂಬಂಧಿಸಿ ನಡೆಸಲಾದ ಎರಡು ಸಂಶೋಧನೆಗಳಲ್ಲಿ ಕಂಡು ಬಂದ ಅಂಶಗಳೇನೆಂದರೆ ಗರ್ಭಿಣಿಯರು ಮೊಬೈಲ್ ಫೋನ್ ಬಳಕೆಯಿಂದ ಭ್ರೂಣದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ, ಇಂತಹ ಮಗು ಬಾಲ್ಯಾವಸ್ಥೆಯಲ್ಲಿ ವರ್ತನೆಯಲ್ಲಿ ಅಥವಾ ನಡವಳಿಕೆಯಲ್ಲಿ ಹಲವಾರು ತೊಂದರೆಗಳನ್ನು ಎದುರಿಸುವುದು ಎಂದು ಹೇಳಿದೆ. ಅದೇ ರೀತಿ ೬ ರಿಂದ ೧೮ ತಿಂಗಳ ಅವಧಿಯಲ್ಲಿ ಬೆಳವಣಿಗೆ ಕುಂಠಿತ ಸಮಸ್ಯೆ ಕೂಡ ಎದುರಾಗುವುದು ಎನ್ನಲಾಗಿದೆ. ಇವು ಅಧ್ಯಯನ ವರದಿಯಾಗಿದ್ದರೂ ಈ ಅಂಶಗಳ ಹಿಂದೆ ಕೆಲವೊಂದು ತಾರ್ಕಿಕ ಸತ್ಯಾಂಶಗಳು ಕೂಡ ಅಡಕವಾಗಿವೆ. ಉದಾ : ಒಂದು ವೇಳೆ ತಾಯಿ ಮೊಬೈಲ್‌ನಲ್ಲಿ ಮೈಮರೆತರೆ ಆಕೆ ತನ್ನ ಗರ್ಭದಲ್ಲಿರುವ ಶಿಶುವಿನತ್ತ ಗಮನ ಹರಿಸುವುದಿಲ್ಲ. ಪರಿಣಾಮ ಮಕ್ಕಳ ವರ್ತನೆ ಬದಲಾವಣೆಯಾಗುತ್ತದೆ ಎಂಬುದು ಆ ತಾರ್ಕಿಕ ಸತ್ಯ. ಸಂಶೋಧಕರ ಅಂಕಿ ಅಂಶಗಳ ಪ್ರಕಾರ ಸುಮಾರು ೧೩,೦೦೦ ಮಕ್ಕಳಲ್ಲಿ ಈ ಸಮಸ್ಯೆಗಳು ಕಂಡು ಬಂದಿವೆ.
ಮೊಬೈಲ್ ಏಕೆ ಸುರಕ್ಷಿತವಲ್ಲ..
ಮೊಬೈಲ್‌ಗಳು ಅಯಾನು ವಿದ್ಯುತ್ಕಾಂತೀಯ ಎಂದು ಕರೆಯಲಾಗಿರುವ ಕಡಿಮೆ ಮಟ್ಟದ ರೇಡಿಯೋ ಅಲೆಗಳನ್ನು ಹೊರಬಿಡುತ್ತವೆ. ಪ್ರತಿದಿನ ಹಲವು ಯಾಂತ್ರಿಕ ವಸ್ತುಗಳು ಈ ವಿಕಿರಣಗಳನ್ನು ಬಿಡುಗಡೆ ಮಾಡುತ್ತವೆ. ಟೀವಿ, ಕಂಪ್ಯೂಟರ್ ಮತ್ತು ಮೈಕ್ರೋವೇವ್ ಹೀಗೆ..ಅಯಾನು ವಿಕಿರಣವು ಎಕ್ಸರೇ, ವಿಕಿರಣ ಚಿಕಿತ್ಸೆ ಯಂತ್ರಗಳು ಸಿಟಿ ಸ್ಕ್ಯಾನ್‌ಗಳು ಮೊದಲಾದ ಯಂತ್ರಗಳಿಂದ ಹೊರಸೂಸುವ ಅಯಾನು ವಿಕಿರಣಕ್ಕಿಂತ ಮೃದುವಾಗಿರುತ್ತದೆ. ಈ ಅಯಾನು ವಿಕಿರಣವು ಭ್ರೂಣದಲ್ಲಿರುವ ಶಿಶುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರುವುದನ್ನು ತಜ್ಞರು ಒಪ್ಪಿಕೊಂಡಿದ್ದಾರೆ.
ಎಸ್‌ಎಆರ್ ಎಂದರೇನು ?
ಪ್ರತಿ ಮೊಬೈಲ್‌ನಲ್ಲಿಯೂ ಅದು ಹೊರ ಸೂಸುವ ವಿಕಿರಣ ಮಟ್ಟವನ್ನು ವಿವರಿಸಲಾಗಿದೆ. ಇದನ್ನು ನಿರ್ಧಿಷ್ಟ ಹೀರಿಕೊಳ್ಳುವ ಪ್ರಮಾಣ (ಎಸ್‌ಎಆರ್) ಮೌಲ್ಯ ಎಂದು ಕರೆಯುತ್ತಾರೆ. ಈ ಎಸ್‌ಎಆರ್ ದರ ನಿಮ್ಮ ಫೋನಿನಿಂದ ನಿಮ್ಮ ದೇಹ ಎಷ್ಟು ಪ್ರಮಾಣದ ವಿಕಿರಣ ಹೀರಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.
ಯುರೋಪಿನಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್‌ಗಳು ಎಸ್‌ಎಆರ್ ಮೌಲ್ಯವು ಪ್ರತಿ ಕಿಲೋಗ್ರಾಮ್‌ಗೆ ೨ ವ್ಯಾಟ್‌ಗಿಂತ ಹೆಚ್ಚು ಶಕ್ತಿ ಹೀರಿಕೊಳ್ಳದಿರುವಂತೆ ಖಚಿತಪಡಿಸಿಕೊಳ್ಳಬೇಕೆಂದು ನಿಯಮವಿದೆ. ಹೆಚ್ಚಿನ ಎಸ್‌ಎಆರ್ ಫೋನುಗಳು ನಿಮ್ಮನ್ನು ಹೆಚ್ಚು ವಿಕಿರಣ ಹೀರುವಂತೆ ಮಾಡುತ್ತದೆ. ಈಗಿಂದೀಗಲೇ ನಿಮ್ಮ ಎಸ್‌ಎಆರ್ ದರವನ್ನು ಪರೀಕ್ಷಿಸಿಕೊಳ್ಳಿ.. ಒಂದು ವೇಳೆ ನಿಮ್ಮ ಮೊಬೈಲ್ ಸಿಗ್ನಲ್ ಚೆನ್ನಾಗಿದ್ದರೆ ಅಂತಹ ಮೊಬೈಲ್ ಎಸ್‌ಎಆರ್ ಮೌಲ್ಯ ಕಡಿಮೆ ಹೊಂದಿದೆ ಎಂದರ್ಥ. ಹಾಗಾಗಿ ವಿಕಿರಣ ಮಟ್ಟವನ್ನು ಕಡಿಮೆಗೊಳಿಸಬೇಕಾದರೆ ಸಿಗ್ನಲ್ ಉತ್ತಮವಾಗಿರುವ ಜಾಗದಲ್ಲಿ ಮೊಬೈಲ್ ಬಳಸಬೇಕು. ಕಡಿಮೆ ಸಿಗ್ನಲ್ ಇದ್ದರೆ ಫೋನ್ ಕೆಲಸ ನಿರ್ವಹಿಸಲು ಹೆಚ್ಚು ಶಕ್ತಿ ಹೀರಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ..
ಅನಿವಾರ್ಯ ಪರಿಸ್ಥಿತಿಯಲ್ಲಿ ಮೊಬೈಲ್ ಬಳಕೆ ಹೇಗೆ ಮಾಡಬೇಕು ?
ನಮ್ಮಲ್ಲಿ ಹಲವು ಮಂದಿಗೆ ದೈನಂದಿನ ಜೀವನದಲ್ಲಿ ಪ್ರತಿದಿನ ಮೊಬೈಲ್ ಫೋನ್ ಬಳಕೆಯಿಲ್ಲದೆ ಯಾವುದೇ ಕೆಲಸಗಳಿಲ್ಲ. ಹಾಗಾಗಿ ಮೊಬೈಲ್ ಬಳಕೆಯಿಲ್ಲದೆ ಜೀವನವಿಲ್ಲ ಎಂದಿರುವ ಗರ್ಭಿಣಿ ಹೆಣ್ಮಕ್ಕಳು ಈ ಕೆಳಗಿನ ನಿಯಮಗಳನ್ನು ತಪ್ಪದೆ ಪಾಲಿಸಿ..
ಮೊಬೈಲ್ ಬಳಕೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅವಧಿಗೆ ಕಡಿತಗೊಳಿಸಿ ಅಥವಾ ಬದಲೀ ವ್ಯವಸ್ಥೆಯೇ ಇಲ್ಲವೆಂದಾದರೆ ಮಾತ್ರ ಮೊಬೈಲ್ ಬಳಸಿ..
ಮೊಬೈಲ್ ಕರೆ ಬದಲು ಸ್ಥಿರ ದೂರವಾಣಿ ಅಥವಾ ಎಸ್‌ಎಂಎಸ್ ಬಳಸಿ…
ಮೊಬೈಲ್ ಕರೆ ಮಾಡುವ ಮೊದಲು ಸಿಗ್ನಲ್ ಉತ್ತಮವಾಗಿರುವುದನ್ನು ಖಚಿತಪಡಿಸಿಕೊಳ್ಳಿ..
ನೀವು ನಿಮ್ಮ ಫೋನ್ ಬಳಕೆಯ ವೇಳೆ ಇಯರ್ ಫೋನ್ ಅಥವಾ ತಲೆಯಿಂದ ಎಸ್‌ಎಆರ್ ಆದಷ್ಟು ದೂರವಿರುವಂತೆ ನೋಡಿಕೊಳ್ಳಿ…
************
ಇಂದಿರಾ ನಾಗೇಶ್ ಕಾನಡ್ಕ
ಮೂರ್ತಿ ನಿವಾಸ, ಮೇಗಿಣಮಡಕಣ ಮನೆ
ಕೂಳೂರು-ಕಾವೂರು ರಸ್ತೆ
ಪಂಜಿಮೊಗರು ಪೋಸ್ಟ್ -೦೧೩
ಮಂಗಳೂರು
**************************

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.