ಸೂರ್ಯನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಸಮಾಜದಲ್ಲಿ ತಾರತಮ್ಯದ ನಡತೆ ಸರಿಯಿಲ್ಲ: ಸ್ವಾಮೀಜಿ

hosangadi suryanarayana garbagudi shilanyasaಬೆಳ್ತಂಗಡಿ: ಸೃಷ್ಟಿಯನ್ನು ದೇವರು ಮಾಡಿದಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಹೀಗಾಗಿ ಅದೇ ಸೃಷ್ಟಿಯಲ್ಲಿರುವ ನಾವು ತಾರತಮ್ಯದಿಂದ ಇರುವುದನ್ನು ಬಿಡಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಹೊಸಂಗಡಿ ಗ್ರಾಮದ ಪೆರಿಂಜೆ ಸನಿಹದ ಬಲ್ಲಂಗೇರಿ-ಅಂಗರಕರಿಯ ಎಂಬಲ್ಲಿ ಡಿ.7 ರಂದು ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಕಾರಾತ್ಮಕ ಚಿಂತನೆ ಸದಾ ನಮ್ಮಲ್ಲಿದ್ದರೆ ಎಲ್ಲವೂ ಒಳಿತಾಗಿಯೇ ಹೋಗುತ್ತದೆ. ನಮ್ಮಲ್ಲಿನ ಕೊರತೆಯನ್ನು ಹೋಗಲಾಡಿಸುವ ಬದಲು ಇನ್ನೊಬ್ಬರ ಕೊರತೆಯ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಬೇಕು. ಇದ್ದುದರಲ್ಲಿಯೇ ತೃಪ್ತಿಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಕರಿಂಜೆಶ್ರೀ ಶಕ್ತಿಗುರುಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಅವರು, ಪ್ರತ್ಯಕ್ಷ ದೇವ೦ರಾಗಿರುವ ಸೂರ್ಯ ನಾರಾಯಣನ ಕ್ಷೇತ್ರವು ಫಲ್ಗುಣಿ ನದಿ ತೀರದಲ್ಲಿರುವುದರಿಂದ ಪ್ರಸಿದ್ಧ ತೀರ್ಥಕ್ಷೇತ್ರ ವಾಗುವುದರಲ್ಲಿ ಸಂದೇಹವಿಲ್ಲ. ಭಗವಂತನಲ್ಲಿ ಅಚಲ ನಂಬಿಕೆ, ಶ್ರದ್ಧೆ ಇದ್ದರೆ ನವೀಕರಣ ಕಾರ್ಯಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದ ಅವರು ಕ್ಷೇತ್ರದಲ್ಲಿ ಗೋಪೂಜೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದರು. ಉದ್ಯಮಿ ಹರೀಶ್ ಪೂಂಜ ಅವರು, ಹಿರಿಯರ ಆಶೀರ್ವಾದ, ಯುವಕರ ಶಕ್ತಿ ಮೇಳೈಸಿದರೆ ಯಾವುದೇ ಕೆಲಸ ದೊಡ್ಡದಲ್ಲ. ಜಾತಿ, ಮತ, ಪಕ್ಷ ಬಿಟ್ಟು ಏಕ ಮನಸ್ಸಿನಿಂದ ಮುಂದೆ ನಡೆಯುವ ಇಲ್ಲಿನ ಕ್ಷೇತ್ರದ ನವೀಕರಣದಲ್ಲಿ ಪಾಲ್ಗೊಳ್ಳೋಣ ಎಂದರು. ಉದ್ಯಮಿಗಳಾದ ಮೂಡಬಿದರೆಯ ಕೆ. ಶ್ರೀಪತಿ ಭಟ್, ವೇಣೂರು ಭಾಸ್ಕರ ಪೈ, ಮೂಡಬಿದ್ರೆಯ ದೇವಿಪ್ರಸಾದ ಶೆಟ್ಟಿ ವೇದಿಕೆಯಲ್ಲಿದ್ದರು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರು ಶಿಲಾನ್ಯಾಸ ನೆರವೇರಿಸಿದರು. ವೇ| ಮೂ| ಉದಯ ಪಾಂಗಾಣ್ಣಾಯ ತಂತ್ರಿಗಳು ಶಿಲಾನ್ಯಾಸದ ವಿಧಿವಿಧಾನಗಳನ್ನು ನೆರವೇರಿಸಿದರು. ಮುಷ್ಠಿ ಹಣ ಸಮರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೇಗುಲ ಅರ್ಚಕ ಸುಬ್ರಹ್ಮಣ್ಯ ಉಡುಪ, ಶ್ರೀ ಸೂರ್ಯನಾರಾಯಣ ಕ್ಷೇತ್ರ ಪುನರ್‌ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ. ಹರಿಪ್ರಸಾದ ಬಜೆ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಕಾರ್ಯದರ್ಶಿ ಎ. ಗಣರಾಜ ಭಟ್ ಉಪಸ್ಥಿತರಿದ್ದರು.
ಕರುಣಾಕರ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ಯನ್. ಸೀತಾರಾಮ ರೈ ಪ್ರಸ್ತಾವಿಸಿ ದರು. ಕಿರಣ್‌ಕುಮಾರ್ ವಂದಿಸಿ, ಸುಧಾಕರ ನೂಯಿ ಕಾರ್ಯಕ್ರಮ ನಿರ್ವಹಿಸಿದರು.
ಫಲ್ಗುಣಿ ನದಿ ಈಶಾನ್ಯದಿಂದ ಪ್ರದಕ್ಷಿಣಾಕಾರವಾಗಿ ಹರಿಯುತ್ತಿರುವ ಸಂಗಮ ಸ್ಥಳವಾಗಿರುವ ಅಂಗರಕರಿ ಯದಲ್ಲಿ ಸುಮಾರು 700 ವರ್ಷಗಳ ಹಿಂದಿನಿಂದಲೂ ಈ ಪ್ರದೇಶ ಅದೆಷ್ಟೋ ಋಷಿಮುನಿಗಳ, ಸಾಧು, ಸಂತರ ತಪೋಭೂಮಿಯಾಗಿ ಇದ್ದದ್ದು ಕಂಡು ಬಂದಿದೆ. ಪುರಾತನ ದೇವಸ್ಥಾನದ ಕುರುಹುಗಳೂ ಜೀರ್ಣಾವಸ್ಥೆಯಲ್ಲಿರುವ ದೇಗುಲದ ಕಟ್ಟಡದ ತಳಪಾಯವೂ ಗೋಚರಿಸಿದ್ದರಿಂದ ಸ್ಥಳೀಯರು ದೇವಾಲಯ ವನ್ನು ಪುನರುತ್ಥಾನಗೊಳಿಸುವ ಸಂಕಲ್ಪವನ್ನು ಕೈಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.