ಬಳ್ಳಮಂಜ ಶೇಷ-ನಾಗ ಜೋಡುಕರೆ ಕಂಬಳ : ಕಂಬಳ ಓಟಗಾರರು ಯುವ ಪೀಳಿಗೆಗೆ ಓಟದ ತರಬೇತಿ ನೀಡಬೇಕು: ಶಾಸಕ ಬಂಗೇರ

ಮಚ್ಚಿನ: ಕಂಬಳ ಕ್ರೀಡೆಯನ್ನು ಸುಪ್ರಿಂ ಕೋರ್ಟ್ ಕೂಡ ಇತ್ತೀಚೆಗೆ ಮಾನ್ಯ ಮಾಡಿದ್ದು ಈ ಕ್ರೀಡೆಯನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ. ಕಂಬಳದ ಓಟದಲ್ಲಿ ಸಿದ್ದಹಸ್ತರೆನಿಸಿದವರು ಈಗಿನ ಯುವ ಪೀಳಿಗೆಗೆ ಓಟದ ತರಬೇತಿಯನ್ನು ನೀಡಿ ಅವರನ್ನು ಸದೃಢರನ್ನಾಗಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ತಲೆಮಾರು ಮುಗಿದ ನಂತರ ಕೌಶಲ್ಯ ತಿಳಿದ ಓಟಗಾರರಿಲ್ಲದೇ ಹೋದರೆ ಭವಿಷ್ಯದಲ್ಲಿ ಕಂಬಳ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ಡಿ. 10 ರಂದು ನಡೆದ ದ.ಕ. ಜಿಲ್ಲೆಯ ಸುಪ್ರಸಿದ್ಧ ಶೇಷ ನಾಗ ಜೋಡುಕರೆ ಕಂಬಳದ ಸಮಾರೋಪದಲ್ಲಿ ಕಂಬಳಕ್ಕೆ ನೆರವು ನೀಡಿದವರಿಗೆ ಸ್ಮರಣಿಕೆ ಮತ್ತು ಕಂಬಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ೩೦ಕ್ಕೂ ಅಧಿಕ ಕಂಬಳ ಕ್ರೀಡಾಕೂಟಗಳು ನಡೆಯುತ್ತಿದ್ದು ಪ್ರಾಣಿದಯಾ ಸಂಘದವರು ಇದೆಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ವರ್ಷಪೂರ್ತಿ ಕೋಣಗಳನ್ನು ಪ್ರೀತಿಯಿಂದ ಸಾಕಿದ ಯಜಮಾನರುಗಳ ಒಂದು ಪೆಟ್ಟು ಹೊಡೆದರೆಂದರೆ ಅದು ಹಿಂಸೆಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಕ್ರೀಡೆ ಅಳಿಯದಂತೆ ನೀವೂ ಕೂಡ ಮನಸ್ಸು ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ, ಕಂಬಳ ಮತ್ತು ಯಕ್ಷಗಾನ ಈ ಎರಡು ವಿಚಾರಗಳನ್ನು ಹೊರತುಪಡಿಸಿ ಕರಾವಳಿಯ ಇತಿಹಾಸ ಪೂರ್ಣವಾಗಲು ಸಾಧ್ಯವೇ ಇಲ್ಲ, ಅದರಲ್ಲೂ ಬಳ್ಳಮಂಜ ಕಂಬಳ ಕ್ರೀಡೆ ಬರೀ ಕ್ರೀಡೆಯಲ್ಲ, ಧಾರ್ಮಿಕ ನಂಬಿಕೆ ಕೂಡ, ಇಲ್ಲಿ ಶ್ರೀ ದೇವರಿಗೆ ಕಂಬಳವೇ ಮಧ್ಯಾಹ್ನದ ಪೂಜೆ ಇದ್ದಂತೆ ಎಂಬುದು ಶ್ರೇಷ್ಠ ಪರಂಪರೆ, ಜಿಲ್ಲೆಯ ಕಂಬಳದ ಕೂಟದಲ್ಲಿ ಜಾತಿ ಮತ ಬೇಧವಿಲ್ಲ, ಮುಸಲ್ಮಾನರು, ಕ್ರೈಸ್ತರೂ ಕೂಡ ಕಂಬಳದ ಕೋಣಗಳ ಯಜಮಾನರುಗಳಾಗಿದ್ದಾರೆ. ಮತ್ತು ಮುಕ್ತವಾಗಿ ಭಾಗವಹಿಸುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಂ.ಆರ್. ಸುಪಾರಿ ಟ್ರೇಡರ್‍ಸ್ ಮಾಲಕ ಹೈದರ್ ಎಂ.ಆರ್. ಮಂಡಂತ್ಯಾರು, ಮಡಂತ್ಯಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ಉಪ್ಪಿನಂಗಡಿ ಶ್ರೀ ದೇವಿ ಮೋಟಾರ್‍ಸ್ ಮಾಲಕ ಚಂದ್ರಹಾಸ ಪಕಳ, ಮಚ್ಚಿನ ಗ್ರಾ. ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್, ಶುಭ ಕೋರಿದರು.
ವೇದಿಕೆಯಲ್ಲಿ ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪ್ರಶಾಂತ್ ಪಕಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜಶೇಖರ್ ಶೆಟ್ಟಿ ಮಡಂತ್ಯಾರು, ಗ್ರಾ.ಪಂ. ಸದಸ್ಯೆ ಚಂಚಲಾ, ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ, ವಿಜಯ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಜನರಲ್ ಮೆನೇಜರ್ ಕೋರಬೆಟ್ಟು ಸುಬ್ಬಯ್ಯ ಶೆಟ್ಟಿಯವರು, ಶಾಸಕ ವಸಂತ ಬಂಗೇರರು ನನಗೆ ಕೊಟ್ಟಿದ್ದ ಭರವಸೆಯಂತೆ ಕಳೆದ ನಾಲ್ಕೂವರೆ ವರ್ಷದಲ್ಲಿ ಮಚ್ಚಿನ ಕ್ಷೇತ್ರಕ್ಕೆ 24 ಕೋಟಿ ರೂ. ಅನುದಾನ ತಂದಿದ್ದಾರೆ. ಅದಕ್ಕಾಗಿ ಅವರಿಗೆ ಗ್ರಾಮದ ಪರವಾಗಿ ಅಭಿನಂದಿಸುತ್ತೇನೆ ಎಂದರು. ಅಲ್ಲದೆ ಕಂಬಳ ಕೂಟದ ಯಶಸ್ವಿಗಾಗಿ ದೇಣಿಗೆ, ಅನ್ನದಾನ ಇತ್ಯಾದಿಯಾಗಿ ಪೂರ್ಣವಾಗಿ ಸಹಕಾರ ನೀಡಿದ ದಾನಿಗಳನ್ನೂ ಅಭಿನಂದಿಸಿ ಮಾತನಾಡಿದರು.
ಸಹಕಾರ ನೀಡಿದವರಿಗೆ ಸ್ಮರಣಿಕೆ ಶಾಲು ನೀಡಲಾಯಿತು. ಊಟದ ದಾನಿಗಳಾದ ಲಕ್ಷ್ಮಣ್ ಬಟ್ರಬೈಲು ತೆಕ್ಕಾರು, ಶಾಶ್ವತ ಫಲಕಗಳ ಪ್ರಾಯೋಜಕರಾದ ಚಂದ್ರಹಾಸ ಪಕಳ ಮತ್ತು ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ತಣ್ಣೀರುಪಂತದ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ ಮೊದಲಾದವರು ವೇದಿಕೆಯಲ್ಲಿದ್ದರು. ಕಂಬಳ ಸಮಿತಿಯ ಉಪಾಧ್ಯಕ್ಷ ಸುಧೀರ್ ಶೆಟ್ಟಿ, ಪ್ರ. ಕಾರ್ಯದರ್ಶಿ ಮೋಹನ ಗೌಡ ಪಳ್ಳತಳ, ಜೊತೆ ಕಾರ್ಯದರ್ಶಿ ಕುಮಾರ್, ಕೋಶಾಧಿಕಾರಿ ಸಂಜೀವ ಮಾಯಿಲೋಡಿ ಸಹಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದರು. ಸದಾನಂದ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಕಾರ್ಯಕ್ರಮ: ಪೂರ್ವಾಹ್ನ ನಡೆದ ಸಮಾರಂಭದಲ್ಲಿ ಅನಂತ್ರಾಮ ಜೋಗಿತ್ತಾಯ ಬಂಗಳಾಯಿ ಕಂಬಳದ ಉದ್ಘಾಟನೆ ನೆರವೇರಿಸಿದರು. ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನವಚೇತನ ತೋಟಗಾರಿಕಾ ಕಂಪೆನಿ ತಣ್ಣೀರುಪಂತ ಇದರ ಅಧ್ಯಕ್ಷರೂ ಆಗಿರುವ ಮಚ್ಚಿನ ಸಹಕಾರಿ ಸಂಘದ ಮಾಜಿ ಸಿಇಒ ದುಗ್ಗಪ್ಪ ಗೌಡ ಪೊಸೊಂದೋಡಿ ಶುಭ ಕೋರಿದರು. ಕಂಬಳದ ಫ್ಲಾಗ್ ತೀರ್ಪುಗಾರರಾದ ಸಂಜೀವ ಶೆಟ್ಟಿ ಮುಗೆರೋಡಿ, ವಸಂತ (ಪದ್ಮನಾಭ) ಕಾರಂದೂರು ಮತ್ತು ಜನಾರ್ದನ ಕರ್ಪೆ ಹಾಗೂ ಎಲ್ಲಾ ತೀರ್ಪುಗಾರರೂ ಶ್ರದ್ಧಾ ಭಕ್ತಿಯಿಂದ ಸೇವೆ ನೀಡಿದರು.ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ಸತೀಶ್ ಕುಮಾರ್ ಹೊಸ್ಮಾರ್, ಲ| ಧರಣೇಂದ್ರ ಕುಮಾರ್ ಜೈನ್ ಮದ್ದಡ್ಕ, ಮಹಾವೀರ ಜೈನ್ ವೇಣೂರು, ಪ್ರಕಾಶ್ ಕಜೆಕ್ಕಾರು, ವಸಂತ ಗೌಡ ಮರಕಡ ಇವರ ತಂಡ ಸಹಕಾರ ನೀಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.