ತಾಲೂಕು ಕಚೇರಿಯಲ್ಲಿ ಲಂಚ ಕೊಟ್ಟರೆ ಮಾತ್ರ ಕಡತ ವಿಲೇ ತಾ.ಪಂ. ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರಿಂದ ಗಂಭೀರ ಆರೋಪ

Thaluk panchayath sabhe 1ಬೆಳ್ತಂಗಡಿ : ತಾಲೂಕು ಕಛೇರಿಯ ಕಿಟಕಿಯ ಮೂಲಕ 100 ರೂ. ಕೊಟ್ಟರೆ ಎಲ್ಲಾ ಕೆಲಸ ನಡೆಯುತ್ತದೆ. ದಯವಿಟ್ಟು ಅಲ್ಲಿ ಝಂಡಾ ಹೂಡಿರುವ ಎಲ್ಲಾ ಸಿಬ್ಬಂದಿಗಳನ್ನು ಸ್ಥಳಾಂತರಿಸಿ, ಅಥವಾ ಬದಲಾಯಿಸಿ ಕ್ರಮ ಕೈಗೊಳ್ಳಿ, ಬೆಳೆ ನೊಂದಾವಣೆಗೆ ವಿ.ಎ ಗಳನ್ನು ವಾರದ ಎಲ್ಲಾ ದಿನಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು ಗ್ರಾಮದಲ್ಲಿ ಯಾವುದೇ ಪ್ರಮಾಣಪತ್ರ ಯಾ ಕಂದಾಯ ಇಲಾಖೆ ಕೆಲಸಗಳು ನಡೆಯುತ್ತಿಲ್ಲ. ಇದನ್ನು ಬದಲಾಯಿಸಿ ಒಂದೆರಡು ದಿನವಾದರೂ ಇಲಾಖೆಯ ಜನರ ಕೆಲಸಕ್ಕೆ ದೊರೆಯುವಂತೆ ಮಾಡಿ ಎಂದು ತಾ.ಪಂ ಸಾಮಾನ್ಯ ಸಭೆಯಲ್ಲಿ ಕೂಗು ಕೇಳಿಬಂತು.
ನ. 13 ರಂದು ತಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಜಿ. ಪಂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಉಪಸ್ಥಿತರಿದ್ದರು. ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಸ್ವಾಗತಿಸಿದರು. ಜಯಾನಂದ ಲಾಯಿಲ ವಂದಿಸಿದರು.
ಸಭೆಯ ಪ್ರಾರಂಭದಲ್ಲೇ ಹಣಕಾಸು ಸ್ಥಾಯಿ ಸಮಿತಿ ಸಭೆಯ ನಡವಳಿಗಳನ್ನು ಕಳೆದ ಬಾರಿ ಕೇಳಿಯೂ ನೀಡದ ಬಗ್ಗೆ ಪ್ರಶ್ನಿಸಿದ ಸದಸ್ಯರಾದ ಜೋಯೆಲ್ ಮೆಂಡೋನ್ಸಾ, ಲಕ್ಷ್ಮೀನಾರಾಯಣ ಇವರು ಕ್ರಮವನ್ನು ಖಂಡಿಸಿದರು. ಕಂದಾಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಸರ್ವೆ ಇಲಾಖೆಯವರು ಸಭೆಯಲ್ಲಿ ಇಲ್ಲದ್ದನ್ನು ತೀವ್ರವಾಗಿ ಆಕ್ಷೇಪಿಸಿದ ವಿಜಯ ಗೌಡ ವೇಣೂರು, ಎಂ ಶಶಿಧರ ಕಲ್ಮಂಜ, ಜೋಯೆಲ್ ಮೆಂಡೋನ್ಸಾ, ಧನಲಕ್ಷ್ಮೀ, ಕೊರಗಪ್ಪ ಗೌಡ ಚಾರ್ಮಾಡಿ, ಸುಧಾಕರ ಲಾಯಿಲ ಅವರು, ತಾಲೂಕಿನ ವೇಣೂರಿನಲ್ಲಿ ಡಿಗ್ರಿ ಕಾಲೇಜಿಗಾಗಿ ಕಾದಿರಿಸಿದ 5 ಎಕ್ರೆ ಜಾಗ ವ್ಯಕ್ತಿಯೊಬ್ಬರಿಂದ ಅತಿಕ್ರಮಣವಾಗಿದೆ ವೇಣೂರು ಸೇತುವೆಗಿಂತ ಸ್ವಲ್ಪ ಮುಂದೆ ಹೆದ್ದಾರಿ ಪಕ್ಕದವರೆಗೂ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿಕೊಂಡು ಅಡಿಕೆ ಗಿಡ ನೆಟ್ಟಿದ್ದಾರೆ, ತಾಲೂಕು ಕಛೇರಿಯಲ್ಲಿ ಖಾಯಂ ತಹಶೀಲ್ದಾರರಿಲ್ಲ, ಪ್ರಭಾರ ಇದ್ದರೂ ಕೆಲಸಗಳು ಆಗುತ್ತಿಲ್ಲ, ಲಂಚ ಕೊಡದೆ ಯಾರ ಕೆಲಸವೂ ಇಲ್ಲ, ಒಂದೇ ಕುಟುಂಬದ ಒಬ್ಬರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು ಮತ್ತೊಬ್ಬರಿಗೆ, ನೀವು ತಮಿಳು ಮೂಲದವರು ಆ ಕಾರಣಕ್ಕೆ ಜಾತಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ ಎಂದು ಹಿಂಬರಹ ನೀಡಲಾಗಿರುತ್ತದೆ, ಇದು ಯಾವ ನ್ಯಾಯ? ಗ್ರಾಮ ಪಂಚಾಯತ್‌ಗಳಲ್ಲಿ ಆರ್‌ಟಿಸಿ ಕೊಡಲಾಗುತ್ತಿತ್ತು. ಈಗ ಅಲ್ಲಿಗೆ ಆರ್‌ಟಿಸಿ ಪೇಪರೇ ಸರಬರಾಜು ಮಾಡಲಾಗುತ್ತಿಲ್ಲ ಎಂಬಿತ್ಯಾಧಿಯಾಗಿ ಆಕ್ಷೇಪಿಸಿದರು.
ಈ ವೇಳೆ ಪ್ರಭಾರ ತಹಶಿಲ್ದಾರ್ ಮುಹಮ್ಮದ್ ಇಸಾಕ್ ಅವರಿಗೆ ಇಒ ಅವರು ಕರೆ ಮಾಡಿ ಸಭೆಗೆ ಬರುವಂತೆ ನೆನಪಿಸಿದರೆ, ಅವರಿಗೆ ಅವರ ಕರ್ತವ್ಯ ಸ್ಥಳ ಮೂಡಬಿದ್ರೆಯಲ್ಲಿ ಸಾಮಾನ್ಯ ಸಭೆ ಇರುವುದರಿಂದ ಅನಾನುಕೂಲವಾಗುತ್ತದೆ. ಸಿಬ್ಬಂದಿಗಳನ್ನು ಕಳಿಸಿರುವುದಾಗಿ ಹೇಳಿದರು. ಈ ವೇಳೆ ಸಭೆಗೆ ಬಂದ ಇಬ್ಬರು ಪ್ರಥಮ ದರ್ಜೆ ಸಹಾಯಕರಾದ ಮಲ್ಲಪ್ಪ ಮತ್ತು ಶಂಕರ್ ಅವರನ್ನುದ್ದೇಶಿಸಿ, ಇವರಿಬ್ಬರೂ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ಅಸಾಧ್ಯ,
ಕಂದಾಯ ಇಲಾಖೆ ಉದ್ಧೇಶಪೂರ್ವಕವಾಗಿಯೇ ಈ ರೀತಿ ಸಭೆಗೊಬ್ಬರಂತೆ ಅಧಿಕಾರಿಗಳನ್ನು ಕಳಿಸಿ ಜಾರಿಕೊಳ್ಳುವ ವ್ಯವಸ್ಥಿತ ಸಂಚು ಮಾಡಿಕೊಂಡಂತಿದೆ ಎಂದು ತೀವ್ರವಾಗಿ ಆಕ್ಷೇಪಿಸಿದರು.
ಈ ವೇಳೆ ಉತ್ತರಿಸಿದ ಇಒ ಅವರು, ನ. 18 ರಂದು ಕಂದಾಯ ಇಲಾಖೆ ಕುಂದುಕೊರತೆ ನಿವಾರಣೆಗಾಗಿ ತಹಶೀಲ್ದಾರ್, ಎಸಿ ಇದ್ದು ವಿಶೇಷ ಸಭೆ ಕರೆಯಲಾಗಿದೆ. ಅಲ್ಲಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ ಎಂದು ತಿಳಿಸಿದರು.
150 ನಿವೇಶನರಹಿತರ ಅರ್ಜಿ ಮಾಯ:
ಉಜಿರೆ ಪಂಚಾಯತ್‌ನಲ್ಲಿ ನಿವೇಶನಕ್ಕೆ ಜಾಗವಿದ್ದು ಫಲಾನುಭವಿಗಳು ನೀಡಿದ 150 ಅರ್ಜಿ ಮಾಯವಾಗಿದೆ. ಈ ನಡುವೆ ಕೆಲವರಿಗೆ 94ಸಿ ಯಲ್ಲಿ ನಿವೇಶನ ಮಂಜೂರಾಗಿದೆ. ಈ ಅರ್ಜಿಗಳು ಎಲ್ಲಿ ನಾಪತ್ತೆಯಾಗಿವೆ ಎಂದು ತನಿಖೆ ನಡೆಸಿ, ಒಬ್ಬರಿಗೇ ಇನ್ನೊಂದು ನಿವೇಶನ ಹೋಗದಂತೆ ವಿಲೇ ಮಾಡಬೇಕು ಎಂದು ಉಜಿರೆ ತಾ.ಪಂ. ಸದಸ್ಯ ಶಶಿಧರ ಎಂ ಕಲ್ಮಂಜ ಸಭೆಯ ಗಮನಸೆಳೆದರು. ಅಲ್ಲದೆ ಪಂಚಾಯತ್ ವತಿಯಿಂದ 4 ಲಕ್ಷ ರೂ. ಖರ್ಚು ಮಾಡಿ ಮಹಿಳಾ ಮಂಡಲದ ಜಾಗದಲ್ಲಿ ಅಕ್ರಮ ಕಟ್ಟಡ ಕಟ್ಟಿದೆ. ಈಗಾಗಲೇ ಅಧಿಕಾರಿಗಳ ಗಮನಕ್ಕೆ ವಿಚಾರ ತರಲಾಗಿದ್ದು ಅದನ್ನು ತೆರವುಗೊಳಿಸುವಂತೆ ಸೂಚನೆ ಬಂದಿದೆ. ಈ ತಪ್ಪು ಎಸಗಿರುವವರ ಮೇಲೆ ಕ್ರಮ ಜರುಗಬೇಕು ಅಲ್ಲದೆ ಅತಿಕ್ರಮಣ ತೆರವಾಗದಿದ್ದಲ್ಲಿ ಮಹಿಳಾ ಮಂಡಲದ ಸದಸ್ಯರೊಂದಿಗೆ ಧರಣಿ ನಡೆಸಲಾಗುವುದು ಎಂದರು.
ಗ್ರಾ.ಪಂ. ಸಿಬ್ಬಂದಿ ನೇಮಕಾತಿಯಲ್ಲಿ ಪಂಚಾಯತ್ ನಿರ್ಣಯದಂತೆ ಮಾಡಿ:
ಸುಜಾತಾ ನವೀನ್ ರೈ ಅವರು ಮಾತನಾಡಿ ಗ್ರಾ.ಪಂ ನೇಮಕಾತಿಯಲ್ಲಿ ಪಂಚಾಯತ್ ನಿರ್ಣಯ ಕೈಗೊಂಡಂತೆ ನೇಮಕಾತಿ ಆದೇಶ ಬರಲಿ. ಇಲ್ಲದಿದ್ದಲ್ಲಿ ಡಾಟಾ ಎಂಟ್ರಿ ಕೆಲಸ ನಿರ್ವಹಿಸುವರನ್ನು ನೇಮಕಾತಿಯಲ್ಲಿ ಪಂಪು ಆಪರೇಟರ್ ಎಂದು ದಾಖಲಿಸಿಕೊಂಡರೆ ಅವರಿಗೂ ಅನ್ಯಾಯವಾದಂತಾಗುತ್ತದೆ ಎಂದು ಇಒ ಅವರ ಗಮನಸೆಳೆದು, ಜಿ.ಪಂ. ಗೆ ನಿರ್ಣಯ ಕಳುಹಿಸುವಂತೆ ಆಗ್ರಹಿಸಿದರು.
ಕೊಕ್ಕಡ ಗ್ರಾ.ಪಂ. ನಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ದಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸುವಂತೆ ಸದಸ್ಯ ಲಕ್ಷ್ಮೀನಾರಾಯಣ ಆಗ್ರಹಿಸಿದರು. ಶೀನ ನಾಯ್ಕ ಅವರು ಈ ಬಗ್ಗೆ ದೂರು ನೀಡಿದ್ದರೂ ಅವರಿಗೆ ಉತ್ತರ ನೀಡಿಲ್ಲ ಎಂದರು.
ಮಾಲಾಡಿ ಶಾಲೆಯ ಜಾಗದೊಳಗೆ ಖಾಸಗಿಯವರಿಗೆ ಕಾರ್ಯಕ್ರಮ ಮಾಡಲು ನಿರ್ಬಂಧ ಇರುವಂತೆ ಇತ್ತೀಚೆಗೆ ಕಬಡ್ಡಿ ಪಂದ್ಯಾಟವೊಂದು ನಡೆದಿದೆ, ಇಲ್ಲಿ ಬಾವಿ ಕೂಡ ಇದ್ದು ಮದ್ಯದ ಬಾಟಲಿಗಳನ್ನು ಎಸೆಯಲಾಗಿದೆ, ಅಲ್ಲದೆ ಇತ್ತೀಚೆಗೆ ಅಲ್ಲಿ ಜಾಗದ ವಿವಾದ ಆಗಿದ್ದು ಶಿಕ್ಷಣ ಇಲಾಖೆ ವತಿಯಿಂದ ಶಾಲೆಯ ಜಾಗವನ್ನು ಅಳತೆ ಮಾಡಿ ವಶಕ್ಕೆ ಪಡೆದುಕೊಂಡು ಆವರಣಗೋಡೆ ರಚಿಸಿ ಎಂದು ಬಿಇಒ ಅವರನ್ನು ಸದಸ್ಯ ಜೋಯೆಲ್ ಮೆಂಡೋನ್ಸಾ ಆಗ್ರಹಿಸಿದರು.
ಮಚ್ಚಿನ ಶಾಲೆಯಲ್ಲಿ ಅಧ್ಯಾಪಕರೊಳಗಡೆ ಹೊಂದಾಣಿಕೆ ಇಲ್ಲದೆ ಆಗಾಗ ಜಗಳ ನಡೆಯುತ್ತಿದೆ ಎಂದು ಕಳೆದ ಸಭೆಯಲ್ಲಿ ಪ್ರಸ್ತಾಪವಾದರೂ ಬಿಇಒ ಅವರು ಇದುವರೆಗೆ ಶಾಲೆಗೆ ಭೇಟಿ ನೀಡದ್ದಕ್ಕೆ ಸದಸ್ಯರು ಘರಂ ಆದರು.
ಧರ್ಮಸ್ಥಳ ಮುಂಡ್ರುಪ್ಪಾಡಿ ಅಂಗನವಾಡಿ ಕೇಂದ್ರದ ಕೆಲಸದಲ್ಲಿ ಗುತ್ತಿಗೆದಾರರಿಗೆ 2 ಲಕ್ಷ ಬಾಕಿ ಇರುವಂತೆ ಉದ್ಘಾಟನೆ ನಡೆಸಿದ್ದು ಸರಿಯಲ್ಲ ಎಂದು ಧನಲಕ್ಷ್ಮೀ ಆಕ್ಷೇಪಿಸಿದರು. ಮಚ್ಚಿನ ನೇರೊಲ್ದ ಪಲಿಕೆ ಬದನಾಡಿ ಎಂಬಲ್ಲಿ ಉದ್ಘಾಟನೆಗೊಂಡ ಸರಕಾರಿ ಕಾಮಗಾರಿ ಉದ್ಘಾಟನೆಯ ಫಲಕದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರ ಹೆಸರನ್ನು ಜನಪ್ರತಿನಿಧಿಗಳಿಗಿಂತ ಮೇಲೆ ಹಾಕಲಾಗಿದ್ದು ಇದು ಫ್ರೋಟೋಕಾಲ್‌ಗೆ ವಿರುದ್ಧವಾದ ನಡೆ, ಆದ್ದರಿಂದ ಫಲಕವನ್ನು ಬದಲಾಯಿಸಬೇಕು ಎಂದರು. ಆಶ್ರಯ ಯೋಜನೆಯಡಿ ಶಾಸಕರ ಕೋಟದಲ್ಲಿ ಹಂಚುವಂತೆ ಎಂದು ಶಬ್ದ ಬಳಕೆಯಾಗಿದ್ದು, ಮನೆ ಹಂಚಿಕೆಯಲ್ಲಿ ಶಾಸಕರಿಗೆ ಕೋಟ ಇದೆಯೇ ಎಂದು ಜೋಯೆಲ್, ಶಶಿಧರ್ ಮೊದಲಾದವರು ಆಕ್ಷೇಪಿಸಿದರು. ಈ ಸಂದರ್ಭ ಸದಸ್ಯ ಗೋಪಿನಾಥ್ ನಾಯಕ್ ಪ್ರತಿಕ್ರಿಯಿಸಿ, ಶಾಸಕರ ಪ್ರಯತ್ನ ಇದ್ದುದರಿಂದ ನಮ್ಮ ತಾಲೂಕಿಗೆ ಇಷ್ಟು ಮನೆಗಳು ಬಂತು ಎಂಬುದನ್ನು ನೀವು ಮರೆತಿದ್ದೀರಿ ಎಂದು ಪ್ರತಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ಶಾಸಕರಿಗೆ ಕೋಟ ಇಲ್ಲ, ಮನೆ ಹಂಚುವ ಕಾರ್ಯದ ಜವಾಬ್ಧಾರಿ ಗ್ರಾ.ಪಂ. ಗೆ ಮಾತ್ರ ಎಂದು ಪ್ರತಿಪಕ್ಷದ ಸದಸ್ಯರು ವಾದಿಸಿದರು. ಇದೇ ಕಾರಣ ಮುಂದಿಟ್ಟುಕೊಂಡು ಕೊಯ್ಯೂರು ಗ್ರಾ.ಪಂ ನಲ್ಲಿ ತಾ.ಪಂ ಸದಸ್ಯರೊಬ್ಬರು ಅಧ್ಯಕ್ಷರಿಗೆ ಹಲ್ಲೆಗೆ ಮುಂದಾಗಿದ್ದು ಎಫ್, ಐ. ಆರ್ ಕೂಡ ದಾಖಲಾಗಿದೆ ಎಂದು ಜೋಯೆಲ್ ಮೆಂಡೋನ್ಸಾ ಪ್ರಶ್ನಿಸಿದರು. ಚರ್ಚೆಯ ಬಳಿಕ ಬದಲಾಗಿರುವ ಸುತ್ತೋಲೆಯೊಂದನ್ನು ಇಒ ಅವರು ಸಭೆಯಲ್ಲಿ ವಾಚಿಸಿದರು. ಚರ್ಚೆಗೆ ವಿರಾಮ ನೀಡಲಾಯಿತು.
ಊರಿನ ಹೊಳೆ, ತೊರೆಗಳಿಂದ ಮರಳು ತೆಗೆಯುವ ಅವಕಾಶವನ್ನು ಆಯಾ ವ್ಯಾಪ್ತಿಯ ಗ್ರಾ.ಪಂ ಗಳಿಗೆ ಟೆಂಡರ್ ನಡೆಸಲು ಅನುಮತಿ ನೀಡುವಂತೆ ಸರಕಾರಕ್ಕೆ ಪತ್ರಬರೆಯಲು ಕಳೆದ ಸಭೆಯಲ್ಲಿ ಆಗ್ರಹಿಸಲಾಗಿದ್ದು, ಈ ಬಗ್ಗೆ ಪ್ರಸ್ತಾಪವೆತ್ತಿದೆ ಎಂ ಶಶಿಧರ ಕಲ್ಮಂಜ ಅವರು, ಲೋಡೊಂದಕ್ಕೆ 20 ಸಾವಿರ ರೂ. ನೀಡಿ ಸರಕಾರದ ಮನೆ ಕಟ್ಟಲು ಬಡವರಿಂದ ಸಾಧ್ಯವಿಲ್ಲ. ಈ ಬಗ್ಗೆ ನೀತಿ ಬರಲೇ ಬೇಕು ಎಂದು ಒತ್ತಾಯಿಸಿದರು.
ಮಾತೃಪೂರ್ಣ ಯೋಜನೆಯಡಿ ಪಾತ್ರೋಪಕರಣ ಖರೀದಿಗೆ ಅನುಮತಿ ನೀಡುವಂತೆ ಪ್ರಭಾರ ಸಿಡಿಪಿಒ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಈ ಯೋಜನೆಯಲ್ಲಿ ಫಲಾನುಭವಿಗಳ ಪ್ರತಿಕ್ರೀಯೆ ಹೇಗಿದೆ ಎಂದು ಸದಸ್ಯರು ಪ್ರಶ್ನಿಸಿದರು. ಉಡುಪಿ, ದ.ಕ ಜಿಲ್ಲೆಯ ಜನ 21 ರೂ ಊಟಕ್ಕೆ 100 ರೂ ಖರ್ಚು ಮಾಡಿ ಬಾಡಿಗೆ ವಾಹನ ಮಾಡಿ ದೂರದ ಅಂಗನವಾಡಿ ಕೇಂದ್ರಕ್ಕೆ ಬರುವಂತಾಗಿದೆ. ಆದ್ದರಿಂದ ಇಲ್ಲಿ ಫಲಾನುಭವಿಗಳಿಗೆ ಮನೆಗೆ ತಲುಪಿಸುವ ವ್ಯವಸ್ಥೆ ಬೇಕು ಎಂದು ಸರಕಾರಕ್ಕೆ ಪತ್ರ ಬರೆಯಿರಿ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಸಿಡಿಪಿಒ ಅವರು, ಕೋಲೋಡಿಯಂತಹಾ ಗ್ರಾಮೀಣ ಪ್ರದೇಶದಲ್ಲಿ ಕೂಡ ಶೇ. 100 ಹಾಜರಾತಿ ಇದೆ. ಮೊದಲಿನಂತೆ ಪೌಷ್ಠಿಕ ಆಹಾರ ಮನೆಗೆ ಕೊಟ್ಟರೆ ಅದು ಎಲ್ಲರು ಹಂಚಿ ತಿನ್ನುವ ಸಾಧ್ಯತೆ ಇರುವುದರಿಂದ ಫಲಾನುಭವಿಗೇ ಪೂರ್ಣ ಲಾಭ ಆಗಲಿ ಎಂಬುದಷ್ಟೇ ಇಲಾಖೆ, ಸರಕಾರದ ಯೋಜನೆ ಎಂದರೂ ಸದಸ್ಯರು ಮಾತ್ರ ಒಪ್ಪಲೇ ಇಲ್ಲ.

ಗುರುನಾರಾಯಣ ಸ್ವಾಮಿ ಜಯಂತಿಗೆ ಆಮಂತ್ರಣವಿಲ್ಲ: ಇಒಗೆ ಮರುಪ್ರಶ್ನೆ ಎಸೆದು ಬಳಿಕ ಕ್ಷಮೆ ಕೇಳಿದ ಪ್ರಥಮ ದರ್ಜೆ ಸಹಾಯಕ
ತಾ.ಪಂ. ಸದಸ್ಯೆ ಕೇಶವತಿ ಅವರು, ನನಗೆ ಶ್ರೀ ಗುರುನಾರಾಯಣ ಸ್ವಾಮಿ ಜಯಂತಿ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದಾಗ ಮಾತನಾಡಿದ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಶಂಕರ್ ಅವರು, ನಾವು ಆಮಂತ್ರಣವನ್ನು ಕಂದಾಯ ನಿರೀಕ್ಷಕರ ಮೂಲಕ ವಿ.ಎ. ಗಳ ಸಹಾಯದಿಂದ ತಪುಪಿಸುತ್ತೇವೆ ಎಂದರು. ಆದರೆ ನನಗೆ ಆಮಂತ್ರಣ ಬಂದಿಲ್ಲ ಯಾಕೆ ಎಂದು ಅವರು ಮರುಪ್ರಶ್ನೆ ಎಸೆದರು. ಈ ವೇಳೆ ತಾಲೂಕು ಕಚೇರಿಯ ಶಂಕರ್ ಅವರು ಎರಡೂ ಕೈ ಗಳನ್ನು ಮೇಲಕ್ಕೆತ್ತಿ ಸ್ವಲ್ಪ ಆವೇಶದ ಸ್ವರದಿಂದ, ತಾ.ಪಂ. ಇಒ ಅವರನ್ನು ಉದ್ಧೇಶಿಸಿ, ಸರಕಾರಿ ಕಾರ್ಯಕ್ರಮದ ಯಶಸ್ಸು ಎಲ್ಲರ ಜವಾಬ್ಧಾರಿ, ನೀವೂ ನಿಮ್ಮ ಸದಸ್ಯರಿಗೆ ಫೋನ್ ಮೂಲಕ ತಿಳಿಸಬೇಕು, ನಾವು ಆಮಂತ್ರಣ ವ್ಯವಸ್ಥೆ ಮಾಡುತ್ತೇವೆ, ಎಲ್ಲವೂ ಈಗ ನನ್ನ ತಲೆಮೇಲೆ ಇದೆ, ಸರಕಾರದಿಂದ ಅನುದಾನ ಬರುವಾಗ ಒಂದು ವರ್ಷ ತಡವಾದದ್ದೂ ಇದೆ. ನಾವು ಕೈಯಿಂದ ಹಣ ಹಾಕಿ ಕಾರ್ಯಕ್ರಮ ಖರ್ಚು ಭರಿಸುತ್ತಿದ್ದೇವೆ ಎಂದರು. ಈ ವೇಳೆ ಖಡಕ್ಕ್ ಆಗಿ ಉತ್ತರಿಸಿದ ಇಒ ಅವರು, ಕೈಯೆತ್ತಿ ಬೀಸಿ ನನ್ನ ವಿರುದ್ಧ ಮಾತನಾಡಬೇಡಿ, ಮೇಲಾಧಿಕಾರಿಯ ವಿರುದ್ಧ ಈ ರೀತಿ ಮಾತನಾಡಿದರೆ ಸಸ್ಪೆಂಡ್ ಆಗಿ ಮನೆಗೆ ಹೋಗುತ್ತೀರಿ ಎಂದರು. ಈ ವೇಳೆ ಅಧ್ಯಕ್ಷೆ
ದಿವ್ಯಜ್ಯೋತಿ ಅವರು ಪ್ರತಿಕ್ರೀಯಿಸಿ, ಕಾರ್ಯಕ್ರಮಕ್ಕೆ ತಹಶಿಲ್ದಾರರ ಹೆಸರಿನಲ್ಲಿರುವ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಗೆ ಹಣ ಬರುತ್ತದೆ. ಅದನ್ನು ಖರ್ಚು ಮಾಡುವಾಗ ಇಒ ಅವರಲ್ಲಿ ಅನುಮತಿ ಕೇಳುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಬಂಗೇರ ಅವರು, ನಿಮ್ಮ ಎಲ್ಲ ಜಯಂತಿಗಳು ನಮ್ಮ ಸಭಾಂಗಣದಲ್ಲಿ ನಡೆಯುವುದು. ನೀವು ಸಮಯವಾಗುವಾಗ ಬರುತ್ತೀರಿ. ಇಲ್ಲಿ ಎಲ್ಲ ಕೆಲಸ ನಾವೇ ಮಾಡುತ್ತೇವೆ ಎಂಬುದು ನೆನಪಿರಲಿ, ಸ್ವಲ್ಪ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆದು ಎಂದರು. ಈ ವೇಳೆ ಎಇಇ ನರೇಂದ್ರ ಮಾತನಾಡಿ, ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಸಭೆ ತಡವಾಗಿ ಆದದ್ದರಿಂದ ಅವ್ಯವಸ್ಥೆ ಆಗಿದೆ ಎಂದರು. ಕೊನೆಗೆ ಶಂಕರ್ ಅವರು ತನ್ನಿಂದಾದ ತಪ್ಪನ್ನು ಒಪ್ಪಿಕೊಂಡು ಸಭೆಯ ಕ್ಷಮೆಯಾಚಿಸಿದರು. ಮುಂದಕ್ಕೆ ಎಲ್ಲರ ಸಲಹೆ ಸಹಕಾರ ಪಡೆದು ಕಾರ್ಯಕ್ರಮ ನಡೆಸೋಣ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.